
ದನ ಕಳ್ಳತನ ಆರೋಪಿಗಳ ಮೇಲೆ ಕೋಕಾ ಕಾಯ್ದೆ ಕೇಸು ದಾಖಲು
ಬಂಟ್ವಾಳ: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆಯಲ್ಲಿ ಇತ್ತೀಚೆಗೆ ದನ ಕಳ್ಳತನಗೈದು ಕೊಂದು ಮಾಂಸ ಮಾಡಿದ ಮೂವರು ಆರೋಪಿಗಳ ಮೇಲೆ ಸಂಘಟಿತ ಅಪರಾಧ ತಡೆ ಕಾಯ್ದೆ(ಕೋಕಾ) ಪ್ರಕರಣ ದಾಖಲಿಸಲಾಗಿದೆ.
ದನ ಕಳವು ಮತ್ತು ವಧೆ ಮಾಡಲಾದ ಪ್ರಕರಣದಲ್ಲಿ ಆರೋಪಿಗಳಿಗೆ ಕೋಕಾ ಕಾಯ್ದೆ ದಾಖಲಿಸಿರುವುದು ರಾಜ್ಯದಲ್ಲಿಯೇ ಇದು ಮಾದಲಾಗಿದೆ ಎಂದು ಎಸ್.ಪಿ. ಡಾ. ಅರುಣ್ ಅವರು ತಿಳಿಸಿದ್ದಾರೆ.
ಇದರ ಜೊತೆಗೆ ಇನ್ನಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಕೋಕಾಕಾಯ್ದೆ ದಾಖಲಿಸುವ ಮೂಲಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅ.14 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಬಳಿ ಜಾನುವಾರು ಕಳವುಗೈದು ಬಳಿಕ ಅದನ್ನು ಅಕ್ರಮವಾಗಿ ವಧೆ ಗೈದು ಅದರ ಅಂಗಾಗಗಳು ಮರುದಿನ ಸಮೀಪದಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48), ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅದೇ ರೀತಿ ಆರೋಪಿಗಳು ಸೆ.5 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದನ ಕಳವು ಪ್ರಕರಣದಲ್ಲಿಯೂ ಆರೋಪಿಗಳಾಗಿದ್ದರು.