‘ಉದ್ಯೋಗ ಸೇಷ್ಟಿಸಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ’: ಡಿವೈಎಫ್‌ಐ ವತಿಯಿಂದ ‘ಯುವಜನ ಜಾಥಾ’ಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಚಾಲನೆ

‘ಉದ್ಯೋಗ ಸೇಷ್ಟಿಸಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ’: ಡಿವೈಎಫ್‌ಐ ವತಿಯಿಂದ ‘ಯುವಜನ ಜಾಥಾ’ಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಚಾಲನೆ


ಬೆಳ್ತಂಗಡಿ: ‘ಉದ್ಯೋಗ ಸೇಷ್ಟಿಸಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ’ ಎಂಬ ಎಂಬ ಘೋಷಣೆಯೊಂದಿಗೆ ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ಯುವಜನ ಜಾಥಾ’ಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಭಾನುವಾರ ಚಾಲನೆ ನೀಡಲಾಯಿತು.


ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಹಿರಿಯ ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ, ಮಾತನಾಡಿ, ನಮ್ಮ ಜಿಲ್ಲೆಗೆ ಬಂದಿರುವ ಕೈಗಾರಿಕೆಗಳಿಂದಾಗಿ ನಮ್ಮ ನೆಲ, ಜಲ, ವಾಯು ಹಾಳಾಗುತ್ತಿದೆ. ಆದರೆ ನಮ್ಮ ಯುವಕರಿಗೆ ಉದ್ಯೋಗಾವಕಾಶಗಳು ಮರೀಚಿಕೆಯಾಗಿಯೇ ಉಳಿದಿದೆ ಎಂಬುದು ದುರಂತ. ಅವಕಾಶಗಳ ಕೊರತೆಯಿಂದಾಗಿ ಯುವ ಸಮುದಾಯ ಅಭದ್ರತೆಯಲ್ಲಿ ಬದುಕುವಂತಾಗಿದೆ. ಡಿವೈಎಫ್.ಐ ಹಮ್ಮಿಕೊಂಡಿರುವ ಈ ಜಾಥಾ ಯುವಜನರನ್ನು ಎಚ್ಚರಗೊಳಿಸುವ ಕಾರ್ಯ ಮಾಡಲಿ ಎಂದು ಹೇಳಿದರು.


ಡಿವೈಎಫ್‌ಐ ದ.ಕ. ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಪ್ರಕ್ಷುಬ್ಧ ವಾತಾವರಣ ಯುವಜನರ ಮೇಲೆ ಗಾಢವಾದ ಪರಿಣಾಮ ಬೀರುತ್ತಿದೆ. ಜಿಲ್ಲೆಯಲ್ಲಿನ ಅಶಾಂತಿಯ ವಾತಾವರಣ ಜಿಲ್ಲೆಯನ್ನು ಅಭಿವೃದ್ಧಿಯಿಂದ ಹಿಂದಕ್ಕೆ ಸರಿಸುತ್ತಿದೆ, ಉದ್ಯೋಗಗಳು ನಾಶವಾಗುತ್ತಿವೆ. ಜಿಲ್ಲೆಯ ಅಭಿವೃದ್ಧಿ ಆಗಬೇಕಾದರೆ, ಉದ್ಯೋಗಗಳು ಸೃಷ್ಟಿಯಾಗಬೇಕಾದರೆ ಮೊದಲು ಶಾಂತಿ ಸೌಹಾರ್ದ ನೆಲೆಸುವಂತೆ ನೋಡಿಕೊಳ್ಳಬೇಕು ಎಂದರು.


ಯುವಜನ ಜಾಥಾದ ನೇತೃತ್ವವನ್ನು ವಹಿಸಿದ್ದ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಬೆಳ್ತಂಗಡಿಯಲ್ಲಿರುವ ತಾಲೂಕು ಕಚೇರಿ ಸಹಿತ ಸರಕಾರದ ವಿವಿಧ ಇಲಾಖೆಗಳಲ್ಲಿ ನೂರಾರು ಹುದ್ದೆಗಳು ಖಾಲಿ ಬಿದ್ದಿದೆ. ಇಲ್ಲಿನ ಪ್ರವಾಸೋದ್ಯಮಕ್ಕೆ ಯಾವ ಆಧ್ಯತೆಯೂ ನೀಡಿಲ್ಲ. ಜಮಲಾಬಾದ್ ನಂತಹ ಕೋಟೆಗಳು, ಪ್ರಾಕೃತಿಕ ಸೌಂದರ್ಯ ಹೊಂದಿರುವ ಹಲವಾರು ಜಲಪಾತಗಳು ಹಾಗೂ ಪಶ್ಚಿಮ ಘಟ್ಟಗಳನ್ನು ಪರಿಸರಕ್ಕೆ ಯಾವುದೇ ಅಡ್ಡಿಯಾಗದಂತೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಅಭಿವೃದ್ಧಿಗೊಳಿಸಲು ಸಾಧ್ಯವಾದರೇ ಬೆಳ್ತಂಗಡಿ ಭಾಗದ ಯುವಜನರಿಗೆ ಹಲವು ಉದ್ಯೋಗಗಳು ಸೃಷ್ಡಿಯಾಗಲು ಸಾಧ್ಯವಾಗಲಿವೆ ಎಂದರು. 


ವೇದಿಕೆಯಲ್ಲಿ ಕೋಶಾಧಿಕಾರಿ ಮನೋಜ್ ವಾಮಂಜೂರು, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕಿರಣ ಪ್ರಭ, ಭಾರತ ವಿದ್ಯಾರ್ಥಿ ಸಂಘಟನೆಯ ವಿನುಶ ರಮಣ, ಇನಾಸ್ ಬಿ.ಕೆ., ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಅದಿತಿ, ಕಾರ್ಯದರ್ಶಿ ಅಭಿಷೇಕ್ ಬೆಳ್ತಂಗಡಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆ ಬೆಳ್ತಂಗಡಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಹಾಗೂ ರೈತ ಸಂಘದ ಮುಖಂಡರಾದ ಸುರೇಶ್ ಭಟ್ ವಹಿಸಿದ್ದರು.


ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಿ, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತನ್ನಿ ಎಂಬ ಬೇಡಿಕೆಯೊಂದಿಗೆ ಬೆಳ್ತಂಗಡಿಯಿಂದ ಆರಂಭವಾಗಿರುವ ಯುವಜನ ಜಾಥಾ ಜಿಲ್ಲೆಯಾದ್ಯಂತ ಸಂಚರಿಸಿ ಸೆ.೯ ರಂದು ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಸಮಾರೋಪಗೊಳ್ಳಲಿದೆ.


ಕೊನೆಗೆ ಪ್ರತಿರೋಧದ ಪ್ರಜ್ಞೆಯನ್ನು ಮೂಡಿಸುವ ಸೃರನ್ ಎಂಬ ಬೀದಿನಾಟಕ ಪ್ರದರ್ಶಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article