ಪಂಚಗ್ಯಾರಂಟಿ ಯೋಜನೆ ಸಂಪೂರ್ಣ ಅನುಷ್ಠಾನ ಸರ್ಕಾರದ ಗುರಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಅವರು ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ತಾಲೂಕು ಪಂಚಾಯತ್, ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಮಂಜುನಾಥ ಸಭಾಭವನದಲ್ಲಿ ನಡೆದ ಗ್ಯಾರಂಟಿ ಸಮಾವೇಶ ಮತ್ತು ಅದಾಲತ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದೆಲ್ಲೆಡೆ ಒಂದು ಕೋಟಿ 24 ಲಕ್ಷ ಫಲಾನುಭವಿಗಳು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಬಡವರು, ದೀನದಲಿತರು, ಯುವಕರು ಹಾಗೂ ಸಾಮಾನ್ಯ ಜನತೆಗೆ ಕಾಂಗ್ರೆಸ್ ಸರ್ಕಾರ ಆಶಾಕಿರಣವಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದರು.
ದೇಶದಲ್ಲಿ ಮೊದಲ ಬಾರಿಗೆ ಇಂದಿರಾ ಗಾಂಧಿ ಅವರು ಮೈಸೂರು ಜಿಲ್ಲೆಯ ಟಿ.ನರಸಿಪುರದಲ್ಲಿ ಅಂಗನವಾಡಿ ಯೋಜನೆ ಜಾರಿಗೆ ತಂದ ವಿಚಾರವನ್ನು ಸ್ಮರಿಸಿಕೊಂಡ ಸಚಿವರು, ‘ಅಂಗನವಾಡಿಗಳ ಮೂಲಕ ಬಡವರ ಮಕ್ಕಳಿಗೆ ಪೌಷ್ಟಿಕಾಂಶ ಮತ್ತು ಉತ್ತಮ ಆರೋಗ್ಯ ಲಭ್ಯವಾಗುತ್ತಿದೆ. ಮಕ್ಕಳು ದಿಟ್ಟವಾಗಿ ಬೆಳೆಯಬೇಕು, ಅವರು ದೇಶದ ಭವಿಷ್ಯದ ಅಸ್ತಿಯಾಗಬೇಕು’ ಎಂದರು.
ಒಂದು ವರ್ಷದೊಳಗೆ ಕಾರ್ಕಳ ತಾಲೂಕಿಗೆ 220 ಕೋಟಿ ರೂ.ಗಳನ್ನು ಪಂಚಗ್ಯಾರಂಟಿ ಮೂಲಕ ನೀಡಲಾಗಿದೆ. ಅರ್ಥಿಕ ಸಬಲೀಕರಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು. ತಾಂತ್ರಿಕ ತೊಂದರೆಯಿಂದ 2 ಲಕ್ಷ ಜನರಿಗೆ ಯೋಜನೆಗಳಲ್ಲಿ ತೊಂದರೆ ಉಂಟಾಗಿದ್ದರೂ, ಈಗಾಗಲೇ 50 ಸಾವಿರ ಮಹಿಳೆಯರ ಸಮಸ್ಯೆ ಪರಿಹರಿಸಲಾಗಿದೆ. ಉಳಿದ 1.5 ಲಕ್ಷ ಮಹಿಳೆಯರ ತೊಂದರೆಯನ್ನು ಮುಂದಿನ ತಿಂಗಳಲ್ಲಿ ನಿವಾರಿಸಲಾಗುವುದು ಎಂದರು.
ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ಸಿಗಿಂತ ಖಾಸಗಿ ಬಸ್ಸುಗಳೇ ಹೆಚ್ಚು ಇದ್ದು, ಶಕ್ತಿ ಯೋಜನೆಯ ಲಾಭ ಮಹಿಳೆಯರಿಗೆ ತೀರ ಕಡಿಮೆ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು. ‘ಬಿಜೆಪಿ ಎಷ್ಟೇ ಟೀಕೆ ಮಾಡಿದರೂ ಪಂಚಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಮೋದಿ ಗ್ಯಾರಂಟಿ ದೇಶದಲ್ಲಿ ನಡೆಯುತ್ತಿಲ್ಲ. ಕರ್ನಾಟಕದಲ್ಲಿ ಜಾರಿಯಲ್ಲಿರುವ ಯೋಜನೆಗಳನ್ನು ಮಹಾರಾಷ್ಟ್ರದಲ್ಲಿ ನಕಲು ಮಾಡಿ ಅಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಆದರೆ ಅಲ್ಲಿ ಮಹಿಳೆಯರಿಗಾಗಿ ಒಂದೇ ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ’ ಎಂದು ಅವರು ಬಿಜೆಪಿ ವಿರುದ್ಧ ಕಿಡಿಕಾರಿದರು.
ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾತನಾಡಿ, ‘ಈ ಬಾರಿ ಕಾರ್ಕಳ ತಾಲೂಕಿಗೆ ರಾಜ್ಯ ಸರ್ಕಾರದಿಂದ 35 ಕೋಟಿ ರೂ. ಯೋಜನೆ ಒದಗಿಸಲಾಗಿದೆ. ತಾಲೂಕಿನಲ್ಲಿ ಪಂಚಗ್ಯಾರಂಟಿ ಯಶಸ್ವಿಯಾಗಿ ಜಾರಿಯಾಗಿದೆ’ ಎಂದರು.
ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಉಪಾಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು, ‘ಮಹಿಳೆಯರಿಗೆ ಶಕ್ತಿ ನೀಡುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಜಾತಿ-ಮತಗಳೆನ್ನದೆ 36 ಸಾವಿರ ಜನತೆಗೆ ಸವಲತ್ತು ಹಂಚಿಕೆ ಮಾಡಲಾಗಿದೆ. ಬಡತನ ತೊಲಗಿಸುವುದೇ ನಮ್ಮ ಗುರಿ’ ಎಂದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ್ ಟಿ.ಕೆ., ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೇಶ್ ದೇವಾಡಿಗ, ತಾ.ಪಂ. ಇಒ ಪ್ರಶಾಂತ್, ಕುಕ್ಕುಂದೂರು ಗ್ರಾಮ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಎಸ್. ಕದ್ರೋಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್. ಸ್ವಾಗತಿಸಿ, ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು.