ಪವಾಡ ಪುರುಷ ಸಾಸ್ತಾನ ಕಳಿಬೈಲು ಕೊರಗಜ್ಜನ ಪವಾಡ: ರೈಲಿನಲ್ಲಿ ಕಳವಾದ ಚಿನ್ನ ಮತ್ತೆ ಮಡಿಲಿಗೆ
ಘಟನೆ ವಿವರ:
ಆರು ತಿಂಗಳ ಹಿಂದೆ ಕುಂದಾಪುರದ ಮಹಿಳೆ ಬೆಂಗಳೂರಿಂದ ಕುಂದಾಪುರಕ್ಕೆ ರೈಲಿನಲ್ಲಿ ಬರುತ್ತಿದ್ದ ವೇಳೆ ಆಕೆಯ ಬಳಿ ಇದ್ದ 80 ಗ್ರಾಂ. ತೂಕದ 4 ಚಿನ್ನದ ಬಳೆ ಹಾಗೂ ಒಂದು ಕರಿಮಣಿ ಸರ ಕಳವಾಗಿತ್ತು. ಆಕೆ ದಿಕ್ಕು ತೋಚದೆ ಕುಂದಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಆದರೆ 6 ತಿಂಗಳು ಕಳೆದರೂ ಪೊಲೀಸ್ ತನಿಖೆಯಲ್ಲಿ ಯಾವ ಪ್ರಗತಿಯೂ ಕಾಣದೆ, ಚಿನ್ನದ ಬಗ್ಗೆ ಯಾವುದೇ ಸುಳಿವೂ ಸಿಗದೇ ಇದ್ದಾಗ ಚಿನ್ನ ಕಳೆದುಕೊಂಡ ಮಹಿಳೆ ಚಿಂತೆಯಲ್ಲಿ ಬಿದ್ದಿದ್ದರು.
ಇದೇ ಸಮಯದಲ್ಲಿ ಬೇರೆಯವರಿಂದ ಕಳಿಬೈಲ್‌ನ ಕೊರಗಜ್ಜನ ಪವಾಡದ ಬಗ್ಗೆ ತಿಳಿಯಿತು. ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆ ಎಂಬಂತೆ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡು, ಚಿಂತೆಯಲ್ಲೇ ಮುಳುಗಿದ್ದ ಮಹಿಳೆ ನೇರವಾಗಿ ಧಾವಿಸಿದ್ದೆ ಕಳಿಬೈಲ್‌ಗೆ.
ಶ್ರೀ ಕ್ಷೇತ್ರ ಕಳಿಬೈಲ್ ಕೊರಗಜ್ಜನಲ್ಲಿ ಪಾರ್ಥನೆ ಮಾಡಿಕೊಂಡರು. ತನ್ನ ಆಭರಣಗಳನ್ನು ಕದ್ದ ಅಸಾಮಿ ಪತ್ತೆಯಾಗಿ, ತನಗೆ ಆಭರಣಗಳು ದೊರಕುವಂತೆ ಮಾಡು ಸ್ವಾಮೀ ಎಂದು ಬೇಡಿಕೊಂಡರು.
ಪೂಜೆಯ ವೇಳೆ ದೇವಸ್ಥಾನದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಅವರಲ್ಲಿ ಆವಾಹನೆಗೊಂಡ ಕೊರಗಜ್ಜ ‘ಚಿನ್ನ ಕದ್ದವನನ್ನು ಗೋಚರಕ್ಕೆ ಬರುವ ಹಾಗೆ ಮಾಡುತ್ತೇನೆ. ಅಲ್ಲದೆ ಕಳೆದುಕೊಂಡ ಚಿನ್ನವನ್ನೂ ನಿಮ್ಮ ಮಡಿಲಿಗೆ ಸೇರಿಸುತ್ತೇನೆ’ ಎನ್ನುವ ದೈವನುಡಿ ಕೊಟ್ಟು ಅಭಯ ನೀಡಿದ.
ಕಳಿಬೈಲ್ ಕೊರಗಜ್ಜನ ಇದುವರೆಗಿನ ಪವಾಡಗಳನ್ನು ಕೇಳಿ ತಿಳಿದುಕೊಂಡಿದ್ದ ಸಂತೃಸ್ತ ಮಹಿಳೆ, ತನ್ನ ಚಿನ್ನಾಭರಣಗಳನ್ನೂ ಕೊರಗಜ್ಜ ದೊರಕಿಸದೆ ಬಿಡನು ಎಂದು ಬಲವಾಗಿ ನಂಬಿದ್ದರು. ಅದೂ ಆತನ ಅಭಯ ನುಡಿ ಕೇಳಿ ತನ್ನ ನಂಬುಗೆ ಇನ್ನೂ ಬಲವಾಗಿತ್ತು. ಇಷ್ಟೆಲ್ಲಾ ಆಗಿ ಒಂದು ವಾರದೊಳಗೆ ಚಿನ್ನ ಕದ್ದ ಅಂತರ್ ರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸಿದರು!
ಆದರೆ ಆ ಖತರ್ನಾಕ್ ಆರೋಪಿ ಅಷ್ಟರಲ್ಲಾಗಲೇ ಕದ್ದ ಚಿನ್ನವನ್ನು ಕರಗಿಸಿ 60 ಗ್ರಾಂ ಬೇರೆಯವರಿಗೆ ಮಾರಾಟ ಮಾಡಿದ್ದ. ಅವನಿಂದ ಪೊಲೀಸರು ಚಿನ್ನವನ್ನು ವಶಕ್ಕೆ ಪಡೆದು ಮಹಿಳೆಗೆ ನೀಡಿರುತ್ತಾರೆ. ಇನ್ನು 20 ಗ್ರಾಂ. ಚಿನ್ನ ಪತ್ತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಈ ಚಿನ್ನವನ್ನು ಪಡೆದ ಮಹಿಳೆ ನೇರವಾಗಿ ಕಳಿಬೈಲು ಕೊರಗಜ್ಜನಲ್ಲಿ ಬಂದು, ಪೂಜೆ ನೀಡಿ, ಕ್ಷೇತ್ರದಲ್ಲಿನ ಮಾಸ್ತಿಯಮ್ಮನಿಗೆ ಒಂದು ಗ್ರಾಂ. ಚಿನ್ನವನ್ನು ಅರ್ಪಿಸಿ ಪೂಜೆ ಸಲ್ಲಿಸಿದ್ದಾರೆ.
ತೀರಾ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ ಕೊರಗಜ್ಜ ತನ್ನ ನಂಬಿ ಬಂದವರನ್ನು ಎಂದೂ ನಿರಾಸೆಗೊಳಿಸಿಲ್ಲ. ಪ್ರಾಮಾಣಿಕವಾದ ಬೇಡಿಕೆಗಳನ್ನು ಎಂದೂ ಕಡೆಗಣಿಸಿಲ್ಲ. ಅದಕ್ಕೆ ತಕ್ಕಂತೆ ಕ್ಷೇತ್ರದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಅವರು, ಕ್ಷೇತ್ರದ ಅಭಿವೃದ್ಧಿ, ದೂರ ದೂರದಿಂದಲೂ ಕೊರಗಜ್ಜನ ಕೃಪೆ ಬೇಡಿ ಬರುವ ಭಕ್ತಾದಿಗಳಿಗೆ ಅನುಕೂಲತೆಗಳನ್ನು ಒದಗಿಸುವಲ್ಲಿ ಶ್ರಮಿಸುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಕಳಿಬೈಲು ಪ್ರದೇಶದಲ್ಲಿ ನೆರೆ ಏರಿ ಕ್ಷೇತ್ರದಲ್ಲೆಲ್ಲ ನೀರು ತುಂಬಿತ್ತು. ಅದೇ ವೇಳೆ ದೂರದ ಮಂಗಳೂರಿನಿಂದ ಕೊರಗಜ್ಜನ ದರ್ಶನ ಕೋರಿ ಬಂದ ಭಕ್ತರು ದೋಣಿಯಲ್ಲೇ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
