ಮಂಗಳೂರು ವಿವಿ: ಅರ್ಹ 23 ಸಿಬ್ಬಂದಿಗಳಿಗೆ ಮುಂಭಡ್ತಿ
Tuesday, September 9, 2025
ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯ ಶಿಕ್ಷಕೇತರ ಉದ್ಯೋಗಿಗಳ ಸಂಘ (ರಿ)ದ ನಿರಂತರ ಪ್ರಯತ್ನದ ಫಲವಾಗಿ, ಮಂಗಳೂರು ವಿಶ್ವವಿದ್ಯಾನಿಲಯ ಅರ್ಹ 23 ಸಿಬ್ಬಂದಿಗಳಿಗೆ ಮುಂಭಡ್ತಿ ನೀಡಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಪವಿತ್ರಾ ಪ್ರಕರಣದ ನಂತರದಲ್ಲಿ ಮುಂಭಡ್ತಿಗೆ ಸಂಬಂಧಿಸಿ ಸರ್ಕಾರದ 2017ರ ಅಧಿನಿಯಮ ಅನುಷ್ಠಾನಗೊಳಿಸುವ ಸಲುವಾಗಿ 1980 ರಿಂದ 2025 ರವರೆಗೆ ಜೇಷ್ಠತಾ ಪಟ್ಟಿಯನ್ನು ಪರಿಶೀಲಿಸಿ ಸಂಬಂಧಿಸಿದ ಸಮಿತಿಗಳಲ್ಲಿ ಮಂಡಿಸಿ, ಸೆಪ್ಟೆಂಬರ್ 3 ರಂದು ಸಿಂಡಿಕೇಟ್ ಸಭೆಯ ಗಮನಕ್ಕೆ ತಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಸಿಬ್ಬಂದಿಗಳ ಮುಂಭಡ್ತಿ ಬಗ್ಗೆ ವಿಶ್ವವಿದ್ಯಾನಿಲಯ ಸಂಘದ ಪರವಾಗಿ ಕ್ರಮ ಕೈಗೊಂಡಿದೆ ಎಂದು ತಿಳಿಸಲಾಗಿದೆ.
ಶಿಕ್ಷಕೇತರ ಸಿಬ್ಬಂದಿಗಳಿಗೆ ಕಾಲ ಕಾಲಕ್ಕೆ ದೊರಕಬೇಕಾದ ಮುಂಭಡ್ತಿಗೆ ಈ ಜೇಷ್ಠತಾ ಪಟ್ಟಿ, ಮುಂಬರುವ ವರ್ಷಗಳಲ್ಲಿ ಮಹತ್ವದ ಮೈಲುಗಲ್ಲಾಗಲಿದೆ. ಈ ಸಂಬಂಧ ಸಂಘವು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ, ಕುಲಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದೆ.