ಅ.1 ರಂದು ‘ಪಿಲಿನಲಿಕೆ-10’
ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನ(ರಿ). ಮಂಗಳೂರು ಇದರ ಅಧ್ಯಕ್ಷ ಮಿಥುನ್ ರೈ ಅವರ ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ ‘ಪಿಲಿನಲಿಕೆ-10’ ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಅ.1 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದರು.
ಅವರು ಇಂದು ನಗರದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, 10ನೇ ವರ್ಷದ ಸಂಭ್ರಮದ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯಸಭಾ ಸದಸ್ಯ ನಸೀರ್ ಹುಸೇನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದರು, ಶಾಸಕರುಗಳು, ಬಾಲಿವುಡ್ ನಟ ಸುನೀಲ್ ಶೆಟ್ಟಿ, ಸ್ಯಾಂಡಲ್‌ವುಡ್ ನಟರಾದ ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಈಗಾಗಲೇ ನಟ ಸುದೀಪ್ ಜೊತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.
ಈ ವರ್ಷ 10 ತಂಡಗಳು ಭಾಗವಹಿಸಲಿದ್ದು, 26 ಲಕ್ಷ ರೂ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 10 ಲಕ್ಷ ರೂ., ದ್ವಿತೀಯ ಬಹುಮಾನ 5 ಲಕ್ಷ ರೂ., ತೃತೀಯ ಬಹುಮಾನ 3 ಲಕ್ಷ ರೂ. ನೀಡಲಿದ್ದು, ಪ್ರತಿ ತಂಡಕ್ಕೆ 50 ಸಾವಿರ ರೂ. ಗೌರವ ಧನ ನೀಡಲಾಗುವುದು. ಮಾತ್ರವಲ್ಲಿ ಕಪ್ಪು ಹುಲಿ, ಮರಿಗುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ಹೀರಿ 6 ವೈಯಕ್ತಿಕ ಪ್ರಶಸ್ತಿಯೊಂದಿಗೆ 50 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
10ನೇ ವರ್ಷದ ಪಿಲಿನಲಿಕೆ ಸಂಭ್ರಮದ ಸಲುವಾಗಿ ಮೂಡುಬಿದಿರೆ ತಾಲೂಕಿನ ಗ್ರಾಮೀಣ ಭಾಗದ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅದರ ಅಭಿವೃದ್ಧಿಯನ್ನು ಪಡೆಸಲಾಗುವುದು ಎಂದು ಮಿಥುನ್ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಮ್ಮ ಟಿವಿ ಆಡಳಿತ ನಿರ್ದೇಶಕ ಡಾ. ಶವಶಂಕರ್ ಶೆಟ್ಟಿ, ಅವಿನಾಶ್, ವಿಕಾಶ್, ಆನಂಡ್ ರಾಜ್ ಶೆಟ್ಟಿ, ನವೀನ್ ಶೆಟ್ಟಿ ಉಪಸ್ಥಿತರಿದ್ದರು.