ಜಿಲ್ಲೆಯಲ್ಲಿ ಗೋಹತ್ಯೆ ಮೂಲಕ ಸಾಮಾಜಿಕ ಸಾಮರಸ್ಯ ಕೆಡಿಸುವ ಪ್ರಯತ್ನ: ಕುಂಪಲ
Monday, September 8, 2025
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಮತ್ತು ಇತರ ಕಡೆಗಳಲ್ಲಿ ಮತಾಂಧ ದುಷ್ಕರ್ಮಿಗಳು ಅಕ್ರಮವಾಗಿ ಗೋಹತ್ಯೆ ನಡೆಸುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಕದಡಲು ಪ್ರಯತ್ನಿಸುತ್ತಿರುವುದು ಖಂಡನೀಯ.
ಪೊಲೀಸ್ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಗೋಹಂತಕರನ್ನು ತಕ್ಷಣ ಬಂಧಿಸಿ ಭವಿಷ್ಯದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ಕಾನೂನು ಕ್ರಮ ಜರುಗಿಸಬೇಕೆಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಬಳಿಕ ಗೋಹತ್ಯೆ ನಿಷೇಧ ಕಾನೂನು ಕೇವಲ ಕಾಗದದ ಹುಲಿಯಂತಾಗಿದೆ. ಕೇವಲ ಮತಗಳಿಕೆಯ ಒಂದೇ ಉದ್ದೇಶಕ್ಕಾಗಿ ಹಿಂದುಗಳು ಪೂಜಿಸುವ ಗೋವಿನ ವಧೆಯಾಗುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರವು ಮೌನ ವಹಿಸಿದೆ. ಜಿಲ್ಲೆಯಲ್ಲಿ ಹಿಂದುಗಳ ಹಬ್ಬದ ವಿಚಾರದಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸುವ ಪೊಲೀಸ್ ಅಧಿಕಾರಿಗಳಿಗೆ ಗೋವಿನ ಮೂಕ ರೋಧನೆ ಕೇಳುವುದಿಲ್ಲವೇ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಬಳಿಯುವ ಪರಿಪಾಠವನ್ನು ಬದಿಗಿರಿಸಿ ಗೋ ಹಂತಕರ ಹೆಡೆಮುರಿ ಕಟ್ಟುವ ಕಾರ್ಯ ನಡೆಸಬೇಕೆಂದು ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.