ಸೆ. 16ರಂದು ಅಬ್ಬಕ್ಕ ರಥಯಾತ್ರೆ ಸಮಾರೋಪ

ಸೆ. 16ರಂದು ಅಬ್ಬಕ್ಕ ರಥಯಾತ್ರೆ ಸಮಾರೋಪ

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ನಡೆಯುತ್ತಿರುವ ರಾಣಿ ಅಬ್ಬಕ್ಕ ರಥಯಾತ್ರೆಯ ಸಮಾರೋಪ ಸಮಾರಂಭ ಹಾಗೂ ಬೃಹತ್ ಶೋಭಾಯಾತ್ರೆ ಸೆ.16ರಂದು ಮಂಗಳೂರಿನಲ್ಲಿ ನಡೆಯಲಿದೆ.

ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕಳ 500ನೇ ಜನ್ಮ ಜಯಂತಿಯ ಪ್ರಯುಕ್ತ ಎಬಿವಿಪಿ ವತಿಯಿಂದ ಅಬ್ಬಕ್ಕ ರಥಯಾತ್ರೆಯನ್ನು ಸೆಪ್ಟೆಂಬರ್ 6ರಿಂದ ಆರಂಭಿಸಿದ್ದು, ರಾಜ್ಯಾದ್ಯಂತ ಯಶಸ್ವಿಯಾಗಿ ಸಂಚರಿಸಿ ಸೆ. 16ರಂದು ಮಂಗಳೂರು ತಲುಪಲಿದೆ. ಬೆಳಗ್ಗೆ 9.30ಕ್ಕೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕ್ರೀಡಾಂಗಣದಿಂದ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಹಂಪನಕಟ್ಟೆವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, 3000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 11.30ಕ್ಕೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಬಂಟ್ವಾಳ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸಂಸ್ಥಾಪಕ ಡಾ. ತುಕಾರಾಮ್ ಪೂಜಾರಿ ಮುಖ್ಯ ವಕ್ತಾರರಾಗಿ ಭಾಗವಹಿಸುವರು. ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ಸಿದ್ದು ಪಿ. ಅಲಗೂರ್, ಬೆಳ್ತಂಗಡಿ ಎಕ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್‌ಕುಮಾರ್ ಜೈನ್, ಲೇಖಕಿ ರಶ್ಮಿ ಸಾಮಂತ್, ಮೂಡುಬಿದಿರೆಯ ರಾಣಿ ಅಬ್ಬಕ್ಕ ಮನೆತನ ವಂಶಸ್ಥ ಕುಲದೀಪ್ ಚೌಟ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ. ರವಿ ಮಂಡ್ಯ ಅಧ್ಯಕ್ಷತೆ ವಹಿಸುವರು ಎಂದರು.

ಸಂಜೆಯ 5.30ರ ವೇಳೆಗೆ ರಥ ಅಬ್ಬಕ್ಕಳ ಕರ್ಮಭೂಮಿ ಉಳ್ಳಾಲ ತಲುಪಿ ನಂತರ ಮಾಡೂರು ಅಯ್ಯಪ್ಪ ಮಂದಿರದಿಂದ ಬೀರಿ ಜಂಕ್ಷನ್ ಗಣೇಶ ಮಂದಿರದ ಬಳಿ ಸಾರ್ವಜನಿಕ ಸಭೆ ಹಾಗೂ ರಥ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಎಬಿವಿಪಿ ಜಿಲ್ಲಾ ಸಂಚಾಲಕ್ ಶ್ರೀಜಿತ್ ರೈ, ಮಂಗಳೂರು ಮಹಾನಗರ ಕಾರ್ಯದರ್ಶಿ ಶ್ರೀಲಕ್ಷ್ಮಿ, ಮಂಗಳೂರು ತಾಲೂಕು ಸಂಚಾಲಕ್ ಮೋನೀಶ್ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article