ಧರ್ಮಸ್ಥಳ ಪ್ರಕರಣ: ವಾಮಾಚಾರಿಗಳ ಹಿಂದೆ ಬಿದ್ದ ಎಸ್‌ಐಟಿ

ಧರ್ಮಸ್ಥಳ ಪ್ರಕರಣ: ವಾಮಾಚಾರಿಗಳ ಹಿಂದೆ ಬಿದ್ದ ಎಸ್‌ಐಟಿ

ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದೀಗ ವಾಮಾಚಾರಿಗಳ ಹಿಂದೆ ಬಿದ್ದಿದೆ.

ಭಾನುವಾರ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ್ದ ಎಸ್‌ಐಟಿ ಮುಖ್ಯಸ್ಥ  ಪ್ರಣವ್ ಮೊಹಂತಿ ಅಧಿಕಾರಿಗಳೊಂದಿಗೆ ಭಾನುವಾರ ತಡರಾತ್ರಿ ತನಕ ಸಭೆ ನಡೆಸಿ ಸೋಮವಾರ ಬೆಳಿಗ್ಗೆ ನಿರ್ಗಮಿಸಿದ್ದಾರೆ. ಅಧಿಕಾರಿಗಳಿಂದ ಅವರು ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಬಂಗ್ಲೆಗುಡ್ಡದಿಂದ ಬುರುಡೆ ತಂದಿದ್ದಾಗಿ ಸೌಜನ್ಯ ಮಾವ ವಿಠಲ ಗೌಡ ಹೇಳಿದ್ದು, ಬಂಗ್ಲೆಗುಡ್ಡದಲ್ಲಿ ಇಂದು ಮಹಜರು ನಡೆಸುವ ಸಾಧ್ಯತೆ ಇತ್ತು, ಆದರೆ ಕೊನೆ ಕ್ಷಣದಲ್ಲಿ ಮಹಜರು ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಬಹುತೇಕ ಮಂಗಳವಾರ ಬಂಗ್ಲೆಗುಡ್ಡದ ಇಂಚಿಂಚೂ ಶೋಧ ನಡೆಸುವ ಸಾಧ್ಯತೆ ಇದೆ. 

ವಾಮಾಚಾರದ ಆರೋಪ..

ಬಂಗ್ಲೆಗುಡ್ಡದಲ್ಲಿ ಹೆಣಗಳ ರಾಶಿಯೇ ಇದೆ ಎಂದಿದ್ದ ವಿಠ್ಠಲ ಗೌಡ ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಅಲ್ಲದೆ ಬಂಗ್ಲೆಗುಡ್ಡದಲ್ಲಿ ವಾಮಾಚಾರ ಮಾಡಲಾಗಿದೆ ಎಂದೂ ಆರೋಪಿಸಿದ್ದರು. ಈ ವಿಚಾರವನ್ನು ಪ್ರಣಬ್ ಮೊಹಂತಿಯವರಿಗೂ ತಿಳಿಸಿದ್ದರು. ಹೀಗಾಗಿ ಎಸ್‌ಐಟಿ ಅಧಿಕಾರಿಗಳು, ಬೆಳ್ತಂಗಡಿ ಸುತ್ತಮುತ್ತ ವಾಮಾಚಾರ ಮಾಡುವವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಧರ್ಮಸ್ಥಳ ಪೊಲೀಸರಿಗೆ ಹಾಗೂ ಬೆಳ್ತಂಗಡಿ ಪೊಲೀಸರಿಗೆ ಜವಾಬ್ದಾರಿ ವಹಿಸಲಾಗಿದ್ದು, ತಲೆಬುರುಡೆ ಇಟ್ಟುಕೊಂಡು ವಾಮಾಚಾರ ಮಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಂತಹವರು ಯಾರಾದರೂ ಸಿಕ್ಕಿದರೆ ಎಸ್‌ಐಟಿ ಠಾಣೆಗೆ ಕರೆಸಲು ಸೂಚನೆ ನೀಡಲಾಗಿದೆ.

ಭದ್ರತೆ..

ಬಂಗ್ಲೆಗುಡ್ಡದಲ್ಲಿ ಮಂಗಳವಾರ ಶೋಧ ಕಾರ್ಯ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಗುಡ್ಡದಲ್ಲಿರುವ ಮರಗಳ ಸರ್ವೆ ಕಾರ್ಯ ನಡೆಸಲಿದ್ದು, ಎಷ್ಟು ಮರಗಳಿವೆ, ಮರದ ಅಂದಾಜು ವಯಸ್ಸೆಷ್ಟು ಎಂಬ ವರದಿ ಸಿದ್ಧಪಡಿಸಲು ಎಸ್‌ಐಟಿ ಅಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ಇವತ್ತು ಬಂಗ್ಲೆಗುಡ್ಡ ಸುತ್ತ ಮುತ್ತ ಭದ್ರತೆ ಒದಗಿಸಲಾಗಿದೆ.

ಬಂಗ್ಲೆಗುಡ್ಡದಲ್ಲಿ ಉತ್ಖನನ ನಡೆಸಲು ವಿಠಲ ಗೌಡ ತೋರಿಸುವ ಸ್ಥಳ ಗುರುತು ಮಾಡಿ ಶೋಧ ಕಾರ್ಯ ನಡೆಸುವ ಸಾಧ್ಯತೆ ಇದೆ. ಇದರೊಂದಿಗೆ, ಧರ್ಮಸ್ಥಳ ಆಸುಪಾಸಿನಲ್ಲಿ ಮತ್ತೆ ಉತ್ಖನನ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಮತ್ತೊಂದೆಡೆ, ಧರ್ಮಸ್ಥಳ ಗ್ರಾಮ ಪಂಚಾಯತ್‌ನ ಶವ ದಫನ ದಾಖಲೆಗಳ ಬಗ್ಗೆ ಎಸ್‌ಐಟಿ ಈಗಾಗಲೇ ಮಾಹಿತಿ ಕಲೆ ಹಾಕಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶವಗಳ ದಫನದಲ್ಲೇ ಅಕ್ರಮ ಎಸಗಲಾಗಿದೆ ಎಂಬ ಆರೋಪ ಸಂಬಂಧವೂ ತನಿಖೆ ನಡೆಸುತ್ತಿದೆ. ಇದೀಗ ಮಾಟ-ಮಂತ್ರದ ದೃಷ್ಟಿಕೋನದಲ್ಲೂ ತನಿಖೆಗೆ ಮುಂದಾಗಿದೆ. ಒಟ್ಟಿನಲ್ಲಿ, ಬಂಗ್ಲೆಗುಡ್ಡ ಪ್ರದೇಶದಲ್ಲಿ ಮತ್ತೆ ಉತ್ಖನನ ಶುರು ಮಾಡಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಸದ್ಯ ಎಸ್‌ಐಟಿ ಅಧಿಕಾರಿಗಳಿಗೆ ಯಾವ ರೀತಿ ತನಿಖೆ ಮುಂದುವರಿಸಬೇಕೆಂದು ಸೂಚನೆ ನೀಡಿರುವ ಪ್ರಣಬ್ ಮೊಹಂತಿ ಬೆಂಗಳೂರಿಗೆ ವಾಪಸಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article