
ಸೆ.22ರಿಂದ ಮಂಗಳೂರು ದಸರಾ ವೈಭವ
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ 2025 ಮಹೋತ್ಸವ ಸೆ.22 ರಂದು ಅಕ್ಟೋಬರ್ 3ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಶ್ರೀ ಕ್ಷೇತ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರಾಡಳಿತ ಮಂಡಳಿ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ, ಸೆ.22ರಂದು ಬೆಳಗ್ಗೆ 8.30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಪುಣ್ಯಾಹ ಹೋಮ ನವಕಲಶಾಭಿಷೇಕ ನಡೆದು ಪೂರ್ವಾಹ್ನ 12ಗಂಟೆಗೆ ನವದುರ್ಗೆಯರು, ಮಹಾಗಣಪತಿ ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭಗೊಂಡು ಅಕ್ಟೋಬರ್ 3ರ ತನಕ ಕೇಂದ್ರದ ಮಾಜಿ ಸಚಿವರು. ಕ್ಷೇತ್ರದ ಅಭಿವೃದ್ಧಿಯ ರುವಾರಿ ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಮಂಗಳೂರು ದಸರಾ (ನವರಾತ್ರಿ ಮಹೋತ್ಸವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಬನೆಯಿಂದ ಜರುಗಲಿದೆ. ವೈದಿಕ ಪರಂಪರೆ, ಧಾರ್ಮಿಕ ಶ್ರದ್ಧೆ, ಸಂಸ್ಕೃತಿಯ ಸಂಭ್ರಮ, ಸಂಗೀತದ ಸಪ್ತಸ್ವರ, ಕಲೆ, ಸಾಹಿತ್ಯ, ಕ್ರೀಡೆಸಾಧನೆಗಳ ಏಕತೆಯ ಸಮನ್ವಯ ನವದುರ್ಗೆಯ ಆರಾಧನೆಯ ಭವ್ಯ ದಸರಾ ಈ ಬಾರಿಯ ವಿಶೇಷತೆ.
ಸೆ.22ರಂದು ಬೆಳಗ್ಗೆ 11.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಮಂಗಳೂರು ರಾಮಕೃಷ್ಣ ಮಿಶನ್ನ ಅಧ್ಯಕ್ಷರಾದ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆ ಮುಖ್ಯಸ್ಥೆ ಬಹ್ಮಕುಮಾರಿ ವಿಶ್ವೇಶ್ವರಿ ಜೀ ಅವರಿಂದ ಬಿ.ಜನಾರ್ದನ ಪೂಜಾರಿಯವರ ಸಮ್ಮುಖದಲ್ಲಿ ಚಾಲನೆಗೊಳ್ಳಲಿದೆ.
ದೇವಸ್ಥಾನದ ಓಳಾಂಗಣದ ಮೇಲ್ದಾವಣಿ ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ಹೊಸಮಾದರಿಯಲ್ಲಿ ನವೀಕರಣಗೊಂಡಿದ್ದು, ಸೆ.21ರಂದು ಸಂಜೆ ಕೇತ್ರದ ನವ ನಿರ್ಮಾಣದ ರೂವಾರಿ, ಕೇಂದ್ರದ ಮಾಜಿ ಸಚಿವರು ಮಾನ್ಯ ಜನಾರ್ದನ ಪೂಜಾರಿಯವರು ಉದ್ಘಾಟಿಸಲಿದ್ದಾರೆ.
ಸೆ.22 ರಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎನ್‌ಎಂಪಿಎ ಚೇರ್ಮನ್ ಡಾ.ವೆಂಕಟರಮಣ್ ಅಕೈರಾಜು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವಲಯ ಮುಖ್ಯಸ್ಥ ರಾಜೇಂರ್ದ ಕುಮಾರ್ ಉದ್ಘಾಟಿಸಲಿದ್ದಾರೆ. ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಸಾನಿಧ್ಯ ವಿಶೇಷ ಶಾಲೆ ಮಂಗಳೂರು, ವೈಟ್‌ಡೌಸ್ ಮಂಗಳೂರು, ಎಂ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ನ ಸೇವೆಯನ್ನು ಗುರುತಿಸಿ ಈ ಸಂದರ್ಭ ಪುರಸ್ಕರಿಸಲಾಗುವುದು. ಭರತನಾಟ್ಯದಲ್ಲಿ ಗೊಲ್ಡನ್ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾದನೆಗೈದ ರೆಮೋನಾ, ದೀಕ್ಷಾ ಸುವರ್ಣ ಅವರನ್ನು ಗೌರವಿಸಲಾಗುವುದು.
ಸೆ.25ರಂದು ಸಂಜೆ 6 ಗಂಟೆಗೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಲೋಕಸಭೆ ಸದಸ್ಯ, ಎಐಸಿಸಿಯ ಕೆ.ಸಿ.ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವರು ದಿನೇಶ್ ಗುಂಡೂರಾವ್ ಹಾಗೂ ಜನಪ್ರತಿನಿಧಿಗಳು, ಗಣ್ಯರ ಉಪಸ್ಥಿತಿಯಲ್ಲಿ ಮಾನ್ಯ ಜನಾರ್ದನ ಪೂಜಾರಿಯವರ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಸೆ.28ರಂದು ಬೆಳಗ್ಗೆ 9ಕ್ಕೆ ವಿಶ್ವ ಬಿಲ್ಲವ ಮಹಿಳಾ ಸಂಘದ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾ ಹೋಮ ನೆರವೇರಲಿದೆ.
ಸಾಂಸ್ಕೃತಿಕ ಕಲಾ ವೈಭವ..
ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ತಂಡಗಳನ್ನು ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಮಂಗಳೂರು ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾಪ್ರದರ್ಶನ ನೀಡಲಿದ್ದಾರೆ. 40 ತಂಡಗಳ ಸುಮಾರು 1500ಕ್ಕೂ ಅಧಿಕ ಕಲಾವಿದರಿಗೆ ಕಲಾಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೇರೆ ಬೇರೆ ಕಲಾಸಕ್ತ ಮನಸ್ಸುಗಳಿಗಾಗಿ ಭರತನಾಟ್ಯ, ಜಾನಪದ ಸಂಭ್ರಮ, ಭಕ್ತಿ ಪ್ರಧಾನ ನೃತ್ಯ ರೂಪಕ, ಯಕ್ಷಗಾನ, ಗಾನ ನಾಟ್ಯ ವೈಭವ, ತಾಳಮದ್ದಳೆ, ಹರಿಕಥೆ, ಸಂಗೀತ ಪರಿಕರಗಳ ಜುಗಲ್ಬಂಧಿ, ಸಪ್ತ ವೀಣಾವಾದನ, ಜಾದೂ ಪ್ರದರ್ಶನ. ನವರಸಗಳ ಸಮ್ಮಿಲನ ಈ ಬಾರಿಯ ವಿಶೇಷತೆ.
ಈ ಸಲ ದಸಾರದಲ್ಲಿ ಸಾಹಿತ್ಯ ವೈಭವ, ಮುದ್ದು ಶಾರದೆ ಸ್ಪರ್ಧೆ, ದೇಹದಾಡ್ಯ ಸ್ಪರ್ಧೆ, ದಸರಾ ಮ್ಯಾರಾಥನ್, ಮಕ್ಕಳ ದಸರಾ, ಅಸಾಮಾನ್ಯ ಸ್ತ್ರೀ ಪುರಸ್ಕಾರ ಪ್ರದಾನ, ನಾಲ್ವರು ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಡಿ.ಜೆ.ಗಿಲ್ಲ ಅವಕಾಶ..
ಶ್ರೀ ಕ್ಷೇತ್ರ ಅಭಿವೃದ್ಧಿ ಸಮಿತಿಯ ಹರಿಕೃಷ್ಣ ಬಂಟ್ವಾಳ ಮಾತನಾಡಿ ಅ.2ರಂದು ನಡೆಯುವ ದಸರಾ ಭವ್ಯ ಶೋಭಾಯಾತ್ರೆಯಲ್ಲಿ ಡಿ. ಜೆ. ಗೆ ಅವಕಾಶ ಇಲ್ಲ, ಡಿ. ಜೆ. ಆಳವಡಿಸಿದರೆ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ. ಎಂದರು.
ಬಿ.ಜನಾರ್ದನ ಪೂಜಾರಿಯವರ ನೇತೃತ್ವವದಲ್ಲಿ ಸಂಜೆ ೪ರಿಂದ ನವದುರ್ಗೆಯರು, ಗಣಪತಿ ಮತ್ತು ಶಾರದಾ ಮಾತೆಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ಕ್ಷೇತ್ರದಿಂದ ಹೊರಟು ಕಂಬರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಲಾಲ್ಬಾಗ್, ಬಲ್ಲಾಳ್ಭಾಗ್, ಪಿವಿಎಸ್ ಸರ್ಕಲ್, ನವಭಾರತ ಸರ್ಕಲ್. ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನ ಮುಂಭಾಗದಿಂದ ಕಾರ್ಸ್ಟ್ರೀಟ್, ಚಿತ್ರಾ ಟಾಕೀಸ್ ಅಳಕೆಯಾಗಿ ಶ್ರೀಕ್ಷೇತ್ರಕ್ಕೆ ಬರಲಿದೆ ಎಂದರು.
ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಹೆಚ್. ಸೋಮಜಾಜಿ, ಪದಾಧಿಕಾರಿಗಳಾದ ಉರ್ಮಿಳಾ ರಮೇಶ್, ಬಿ. ಮಾಧವ ಸುವರ್ಣ, ಜಗದೀಪ್ ಡಿ. ಸುವರ್ಣ, ಕೃತಿನ್ ಅಮೀನ್, ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಡಾ. ಬಿ. ಜಿ. ಸುವರ್ಣ, ಹರೀಶ್ ಕುಮಾರ್, ರಾಧಕೃಷ್ಣ, ಶೈಲೇಂದ್ರ ವೈ. ಸುವರ್ಣ, ಜತಿನ್ ಅತ್ತಾವರ, ಪಿ. ಕೆ. ಗೌರವಿ ರಾಜಶೇಖರ್ ಮೊದಲಾದವರಿದ್ದರು.