
ರಾಮಕೃಷ್ಣ ಮಿಷನ್ ಗೆ 75 ವರ್ಷ: ಅಮೃತ ಮಹೋತ್ಸವ
1947ರಲ್ಲಿ ಮಂಗಳೂರಿನಲ್ಲಿ ರಾಮಕೃಷ್ಣ ಮಠದ ಶಾಖೆ ಪ್ರಾರಂಭವಾಯಿತು. 1951ರಲ್ಲಿ ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ತನ್ನ ಸೇವಾ ಚಟುವಟಿಕೆಗಳನ್ನು ಪ್ರಾರಂಭಿಸಿತು. ಕಳೆದ ಏಳು ದಶಕಗಳಿಂದ ಕರಾವಳಿಯಲ್ಲಿ ವಿವಿಧ ರೀತಿಯ ಸೇವಾ ಚಟುವಟಿಕೆಗಳನ್ನು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಿಷನ್ ನಡೆಸುತ್ತಿದೆ. ಅಮೃತ ಮಹೋತ್ಸವ ಅಂಗವಾಗಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರದ್ಧಾ -2025..
ಶ್ರದ್ಧಾ -2025 ವಿಚಾರ ಸಂಕಿರಣವನ್ನು ಸೆ.11 ರಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯದ ಕುಲಪತಿ ಫಾದರ್ ಡಾ. ಪ್ರವೀಣ್ ಮಾರ್ಟಿಸ್ ಉದ್ಘಾಟಿಸಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಎಲಿಕ್ಸರ್‌ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ. ರಾಮಕೃಷ್ಣ ಆಚಾರ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಅವಽಗಳು ಹಾಗೂ ಸಂವಾದ ಇರಲಿದೆ. ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಸಂಚಾಲಕರಾದ ಪೂಜ್ಯ ಸ್ವಾಮಿ ಮಹಾಮೇಧಾನಂದಜಿ, ಬೆಂಗಳೂರಿನ ಮನಸ್ ತರಬೇತಿ ಕೇಂದ್ರದ ನಿರ್ದೇಶಕ ಪ್ರೊ. ಕೆ. ರಘೋತ್ತಮ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.
‘ಸೇವೆ, ಕೌಶಲ್ಯ, ಮೌಲ್ಯಗಳು ಮತ್ತು ಭವಿಷ್ಯದ ದೃಷ್ಟಿಕೋನದಿಂದ ಪದವಿಗಳನ್ನು ಮೀರಿದ ಶಿಕ್ಷಣ’ ಎಂಬ ವಿಷಯದ ಸಂವಾದದಲ್ಲಿ ನಡೆಯಲಿದೆ ಎಂದರು.
ಮೇಧಾ 2025..
ಮೇಧಾ 2025-ವಿಚಾರ ಸಂಕಿರಣವನ್ನು ಸೆ. 12ರಂದು ಬೆಳಗ್ಗೆ 9.30ಕ್ಕೆ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಬೇಲೂರು ಮಠದ ವಿಶ್ವಸ್ಥರು ಹಾಗೂ ಮೈಸೂರಿನ ರಾಮಕೃಷ್ಣ ಆಶ್ರಮದಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಉದ್ಘಾಟಿಸಲಿದ್ದಾರೆ. ಶಾಸಕ ಡಿ. ವೇದವ್ಯಾಸ ಕಾಮತ್, ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಅಕ್ಷಯ್ ಕೆ. ಸಿ. ಭಾಗವಹಿಸಲಿದ್ದಾರೆ. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಅವಽಗಳು ಹಾಗೂ ಸಂವಾದ ಇರಲಿದೆ.
ಪ್ರಜ್ಞಾ-2025..
ಪ್ರಜ್ಞಾ-2025 ವಿಚಾರ ಸಂಕಿರಣವನ್ನು ಸೆ.12 ರಂದು ಬೆಳಗ್ಗೆ 9.30 ಕ್ಕೆ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್, ಬೇಲೂರು ಮಠ ಇದರ ಉಪಾಧ್ಯಕ್ಷರಾದ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಉದ್ಘಾಟಿಸಲಿದ್ದಾರೆ. ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ರವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮಂಗಳೂರಿನ ಎಂ. ಆರ್.ಪಿ. ಎಲ್- ಓಎನ್ಜಿಸಿಸಿಯ ಕಾರ್ಯನಿರ್ವಾಹಕ ನಿರ್ದೇಶಕ ಬಿ. ಎಚ್. ವಿ. ಪ್ರಸಾದ್ ಭಾಗವಹಿಸುವರು. ವಿಚಾರ ಸಂಕಿರಣಗಳಲ್ಲಿ, ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಅಧ್ಯಾಪಕರು- ಪ್ರಾಧ್ಯಾಪಕರುಗಳು, ಬಿ. ಎಡ್ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ವಿವರಿಸಿದರು.
ಅಮೃತ ಮಹೋತ್ಸವ..
ಸೆ. 14ರಂದು ಬೆಳಗ್ಗೆ 10ಕ್ಕೆ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅವರು ಅಧ್ಯಕ್ಷತೆ ವಹಿಸಿ, ‘ಅಮೃತಭವನ’ ಹಾಗೂ ವಿವೇಕಾನಂದ ಅಧ್ಯಯನ ಕೇಂದ್ರದ ಹೊಸ ತರಗತಿ ಕೊಠಡಿಗಳ ಉದ್ಘಾಟನೆ ನೆರವೇರಿಸುವರು. ಮೈಸೂರು ರಾಮಕೃಷ್ಣ ಆಶ್ರಮ ಅಧ್ಯಕ್ಷ ಶ್ರೀ ಮುಕ್ತಿದಾನಂದಜಿ ಅಮೃತ ಮಹೋತ್ಸವ ಉದ್ಘಾಟಿಸುವರು. ಸ್ವಾಮಿ ಜಿತಕಾಮಾನಂದಜಿ, ನಿಟ್ಟೆ ಪರಿಗಣಿತ ವಿವಿ ಛಾನ್ಸಲರ್ ಡಾ.ಎನ್. ವಿನಯ ಹೆಗ್ಡೆ, ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಸಂಸ್ಥೆಯ ಎಂಡಿ ರವೀಂದ್ರ ಪೈ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಮಿಷನ್ಗೆ ಸೇವೆ ಸಲ್ಲಿಸಿದ 75 ಮಂದಿ ಸ್ವಯಂಸೇವಕರಿಗೆ ಹಾಗೂ ಭಜನಾ ಮಂಡಳಿಗಳಿಗೆ ಗೌರವ ಸಲ್ಲಿಸಲಾಗುವುದು. ಮಧ್ಯಾಹ್ನ 2 ಗಂಟೆಗೆ ಪುಣೆಯ ಖ್ಯಾತ ಶಾಸೀಯ ಗಾಯಕ ಆನಂದ್ ಭಾಟೆ ಅವರಿಂದ ‘ಸಂತವಾಣಿ’ ವಿಶೇಷ ಸಂಗೀತ ಕಾರ್ಯಕ್ರಮ ಜರುಗಲಿದೆ. ಅಮೃತ ಮಹೋತ್ಸವ ಅಂಗವಾಗಿ ಮುಂದಿನ ಒಂದು ವರ್ಷ ಪ್ರತಿ ತಿಂಗಳು ಸಾಂಸ್ಕೃತಿಕ, ವೈದ್ಯಕೀಯ, ಯಕ್ಷಗಾನ, ಸಂಗೀತ ಸಹಿತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ತಿಂಗಳ ಮೊದಲ ಭಾನುವಾರ ಸ್ವಚ್ಛತಾ ಅಭಿಯಾನ ನಡೆಯಲಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ರಂಜನ್ ಬೆಳ್ಳರ್ಪಾಡಿ, ದಿಲ್‌ರಾಜ್ ಆಳ್ವ ಉಪಸ್ಥಿತರಿದ್ದರು.