ರಾತ್ರಿ ಧ್ವನಿವರ್ಧಕ ನಿಷೇಧ-ಆತಂಕದಲ್ಲಿ ಸಾಂಸ್ಕೃತಿಕ ಚಟುವಟಿಕೆ: 9ರಂದು ಜನಾಗ್ರಹ ಸಭೆ
ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಹಲವು ಸಂಘಟನೆಗಳ ವತಿಯಿಂದ ಸುದ್ದಿಗೋಷ್ಟಿ ನಡೆಸಿದ್ದು ನೂರಾರು ವರ್ಷಗಳಿಂದ ಯಕ್ಷಗಾನ, ನಾಟಕ ರಂಗಭೂಮಿ ನಡೆದುಬಂದಿದೆ. ಆದರೆ ಈಗಿನ ಕಾಲದಲ್ಲಿ ಧ್ವನಿವರ್ಧಕ ಇಲ್ಲದೆ ಕಾರ್ಯಕ್ರಮ ನಡೆಸುವ ಸ್ಥಿತಿ ಇಲ್ಲ. ರಾತ್ರಿ 10 ಗಂಟೆ ನಂತರ ಧ್ವನಿ ವರ್ಧಕ ಬಳಸಬಾರದೆಂಬ ನೀತಿಯಿಂದಾಗಿ ಇದನ್ನೇ ನಂಬಿಕೊಂಡ ಕಲಾವಿದರು, ಅದಕ್ಕೆ ಸಂಬಂಧಿತ ಸೌಂಡ್ಸ್ ಲೈಟ್ಸ್, ಶಾಮಿಯಾನ, ಇನ್ನಿತರ ಎಲ್ಲ ಜನರೂ ತೊಂದರೆಗೀಡಾಗಿದ್ದಾರೆ. ಈಗ ನಾಟಕ, ಯಕ್ಷಗಾನ ಮುಂದೆ ಕೋಲ, ದೇವರ ಬಲಿಗೂ ಇಂಥದ್ದೇ ತೊಂದರೆ ಎದುರಾಗಲಿದೆ. ಅಕ್ಟೋಬರ್ ನಂತರ ಉತ್ಸವ, ಯಕ್ಷಗಾನ ಸೀಸನ್ ಶುರುವಾಗಲಿದ್ದು ಇದಕ್ಕಾಗಿ ಸರಕಾರದ ಗಮನ ಸೆಳೆಯಲು ಜನಜಾಗೃತಿ ಸಭೆ ನಡೆಸುತ್ತಿದ್ದೇವೆ ಎಂದರು.
ಬೇರೆ ಜಿಲ್ಲೆಗಳಲ್ಲಿ ಇಲ್ಲದ ಕಾನೂನನ್ನು ಇಲ್ಲಿ ಹೇರಲಾಗುತ್ತಿದೆ. ಕಾನೂನು ನೆಪದಲ್ಲಿ ಕರಾವಳಿಯ ಸಾಂಸ್ಕೃತಿಕ ಅಂಗಡಿಯನ್ನೇ ಬಂದ್ ಮಾಡಲಾಗುತ್ತಿದೆ. ಶೇ.80ರಷ್ಟು ಕಲಾವಿದರು ಕಲೆಯನ್ನೇ ಬದುಕಿಗೆ ನಂಬಿಕೊಂಡಿದ್ದಾರೆ. ರಾತ್ರಿ ನಾಟಕ ಮಾಡಬಾರದು ಎಂದು ಅರ್ಧಕ್ಕೆ ನಿಲ್ಲಿಸುವ ಸ್ಥಿತಿಯಾಗಿದೆ. ಇದರಿಂದ ಜನರ ಹೊಟ್ಟೆಗೆ ಬಡಿದಂತಾಗಿದೆ ಎಂದು ದೇವದಾಸ್ ಕಾಪಿಕಾಡ್ ಹೇಳಿದರು.
ಲೈಟ್ಸ್ ಸೌಂಡ್ಸ್ ಮಾಲಕರ ಸಂಘದ ಧನರಾಜ್ ಪರಂಗಿಪೇಟೆ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ 1200ರಷ್ಟು ಮಾಲೀಕರು, 5-6 ಸಾವಿರ ಕಾರ್ಮಿಕರು ಇದ್ದಾರೆ. ಮಳೆಗಾಲದ ಬಳಿಕ ಅಷ್ಟಮಿ, ಗಣೇಶೋತ್ಸವಕ್ಕೆ ಕಾರ್ಯಕ್ರಮ ಸಿಗುತ್ತೆ ಎಂದು ಸಾಲ ಮಾಡಿ ಡಿಜೆ ಇನ್ನಿತರ ಬಾಕ್ಸ್ ಗಳನ್ನ ಹಾಕಿದ್ದರು. ಈಗ ಬಂದ್ ಮಾಡಬೇಕು, ರಾತ್ರಿ ನಿಲ್ಲಿಸಬೇಕು ಎಂದರೆ ಹೇಗೆ? ಇವರು ಮೂರು ತಿಂಗಳು ಮೊದಲೇ ಸೂಚನೆ ಕೊಡಬಹುದಿತ್ತಲ್ಲಾ ಎಂದು ಹೇಳಿದರು.
ಶಾಮಿಯಾನ ನಡೆಸುವವರಲ್ಲೂ 25 ಸಾವಿರದಷ್ಟು ಕಾರ್ಮಿಕರು ಇದ್ದಾರೆ. ಪೊಲೀಸರ ನೀತಿಯಿಂದಾಗಿ ಎಲ್ಲರಿಗೂ ಸಮಸ್ಯೆಯಾಗಿದೆ ಎಂದು ಇನ್ನೊಬ್ಬರು ಹೇಳಿದರೆ, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ 90ರಷ್ಟು ನಾಟಕ ತಂಡಗಳಿವೆ, ಎಲ್ಲರನ್ನೂ ಸಂಪರ್ಕಿಸಿದ್ದು ನಾಡಿದ್ದಿನ ಜನಜಾಗೃತಿ ಸಭೆಗೆ ಒಗ್ಗೂಡಿಸುತ್ತೇವೆ ಎಂದು ನಾಟಕ ಕಲಾವಿದರ ಸಂಘದ ಕೃಷ್ಣ ಮಂಜೇಶ್ವರ್ ಹೇಳಿದರು.
ರಾಜ್ಯ ಸರಕಾರ 2022ರಲ್ಲಿ ಜಾರಿಗೆ ತಂದಿರುವ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ವರೆಗಿನ ಧ್ವನಿವರ್ಧಕ ನಿಷೇಧ ನೀತಿಯಿಂದಾಗಿ ತೊಂದರೆ ಎದುರಾಗಿದೆ, ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೀರಾ ಎಂಬ ಪ್ರಶ್ನೆಗೆ, ನಾಡಿದ್ದು ಜನಜಾಗೃತಿ ಸಭೆ ನಡೆಸುತ್ತಿದ್ದು, ಅದರಲ್ಲಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ವಿಶ್ವ ಹಿಂದೂ ಪರಿಷತ್ ಮುಂದಾಳುಗಳಾದ ಶರಣ್ ಪಂಪ್‌ವೆಲ್, ಎಚ್. ಕೆ. ಪುರುಷೋತ್ತಮ ಜೋಗಿ, ಶಿವಾನಂದ ಮೆಂಡನ್, ಲಕುಮಿ ತಂಡದ ಕಿಶೋರ್ ಶೆಟ್ಟಿ ಮೊದಲಾದವರಿದ್ದರು.