ಅತಿವೃಷ್ಟಿಯಿಂದ ಹಾನಿ: ವಿಶೇಷ ಪ್ಯಾಕೇಜ್‌ಗೆ ಆಗ್ರಹ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಿಂದ ತೀವ್ರ ಹಾನಿ ಉಂಟಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿ ಎಲ್ಲ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಎಲ್ಲರ ಸಭೆ ಕರೆದು, ಸಮಗ್ರ ಚರ್ಚೆ ನಡೆಸಿ ಈ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶಕ್ಕೆ ಉಡುಗೊರೆ..
ದೇಶದಲ್ಲಿದ್ದ ನಾಲ್ಕು ಸ್ತರದ ಜಿಎಸ್ಟಿಯನ್ನು 2 ಸ್ತರಕ್ಕೆ ಇಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶಕ್ಕೆ ಉಡುಗೊರೆ ನೀಡಿದ್ದಾರೆ. ಜಿಎಸ್ಟಿ ಇಳಿಕೆ ಮಾಡಿರುವುದು ಐತಿಹಾಸಿಕ ಘೋಷಣೆ. ಇದರಿಂದ ದೇಶದ ಬಡ ಮತ್ತು ಮಧ್ಯಮ ವರ್ಗದ ಹೊರೆ ಕಡಿಮೆ ಆಗಲಿದೆ. ದೇಶದ ಆರ್ಥಿಕತೆ ಮತ್ತು ಕೈಗಾರಿಕೆಗಳಿಗೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ ಎಂದರು.
ಜಿಎಸ್ಟಿ ಇಳಿಕೆ ಮಾಡಿರುವುದು ಜನಸಾಮಾನ್ಯರಿಗೆ ಬಹುದೊಡ್ಡ ರಿಲೀಫ್ ನೀಡಿದೆ. ಜಿಎಸ್ಟಿ ಇಳಿಕೆಯ ಬಹುದೊಡ್ಡ ಲಾಭ ಆರೋಗ್ಯ ಕ್ಷೇತ್ರಕ್ಕೆ ಸಿಗಲಿದ್ದು, 33 ಜೀವರಕ್ಷಕ ಔಷಧಗಳಿಗೆ ಯಾವುದೇ ಜಿಎಸ್ಟಿ ಹಾಕಿಲ್ಲ. ಅದೇ ರೀತಿ ಆರೋಗ್ಯ ಮತ್ತು ಜೀವ ವಿಮೆಗೂ ಶೂನ್ಯ ಜಿಎಸ್ಟಿ ಅನ್ವಯವಾಗಲಿದೆ. ಜಿಎಸ್ಟಿ ಇಳಿಕೆಯ ಈ ತೀರ್ಮಾನದಿಂದ ದೇಶದಲ್ಲಿ ಬಹುದೊಡ್ಡ ಧನಾತ್ಮಕ ಬದಲಾವಣೆ ಆಗಲಿದೆ ಎಂದು ಕ್ಯಾ.ಚೌಟ ಹೇಳಿದರು.
ಜಿಎಸ್ಟಿ ಕೌನ್ಸಿಲ್ನ ಈ ತೀರ್ಮಾನಕ್ಕೆ ರಾಷ್ಟ್ರದ ಹಿತದೃಷ್ಟಿಯಿಂದ ಎಲ್ಲ ರಾಜ್ಯಗಳೂ ಸಹಕರಿಸಿದ್ದು, ರಾಜ್ಯದಿಂದ ಸೂಕ್ತ ಸ್ಪಂದನೆ ನೀಡಿದ ಸಚಿವ ಕೃಷ್ಣ ಭೈರೇಗೌಡರಿಗೂ ಅಭಿನಂದನೆಗಳು. ನರೇಂದ್ರ ಮೋದಿ ಅವರ ಈ ಐತಿಹಾಸಿಕ ತೀರ್ಮಾನವು ‘ವಿಕಸಿತ ಭಾರತ’ ಪರಿಕಲ್ಪನೆಯಲ್ಲಿ ತೊಡಗಿಕೊಳ್ಳಲು ಜನಸಾಮಾನ್ಯರಿಗೆ ಶಕ್ತಿ ನೀಡಲಿದೆ ಎಂದರು.
ಬಿಜೆಪಿ ಮುಖಂಡರಾದ ಪ್ರೇಮಾನಂದ ಶೆಟ್ಟಿ, ಡಾ.ಶಾಂತಾರಾಮ್ ಶೆಟ್ಟಿ, ಸಂಜಯ ಪ್ರಭು, ಅರುಣ್ ಶೇಟ್, ಪ್ರಸನ್ನ ದರ್ಬೆ, ವಸಂತ ಪೂಜಾರಿ ಉಪಸ್ಥಿತರಿದ್ದರು.