ಆರ್.ವಿ. ದೇಶಪಾಂಡೆ ಕ್ಷಮೆ ಕೇಳಲು ಜನವಾದಿ ಮಹಿಳಾ ಸಂಘಟನೆ ಆಗ್ರಹ
ಮಂಗಳೂರು: ರಾಜ್ಯದ ಹಿರಿಯ ರಾಜಕಾರಣಿ ಆರ್.ವಿ. ದೇಶಪಾಂಡೆ ಅವರು ಹಿರಿಯ ಪತ್ರಕರ್ತೆ ರಾಧಾ ಹಿರೇಗೌಡರ್ ಅವರ ಪ್ರಶ್ನೆಗೆ ಉತ್ತರ ನೀಡುವಾಗ ಬಹಳ ಹಗುರವಾದ ಮತ್ತು ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ. ಅವರು ಕ್ಷಮೆಯಾಚಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.
ಹಳಿಯಾಳ, ದಾಂಡೇಲಿ, ಜೋಯಿಡಾ ವಿಧಾನಸಭಾ ಕ್ಷೇತ್ರದ ಶಾಸಕರು, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಆರ್.ವಿ. ದೇಶಪಾಂಡೆಯವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮತ್ತು ಸಮಾಜದ ಅಭಿವೃದ್ಧಿಗಾಗಿ ಬಹು ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಸ್ಥಾಪನೆ ಕುರಿತು ಹಿರಿಯ ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಪ್ರಶ್ನೆ ಕೇಳಿದ್ದಾರೆ.
ದೇಶಪಾಂಡೆಯವರು ಇಷ್ಟು ಹಿರಿಯ ರಾಜಕಾರಣಿಯಾಗಿ ಒಂಬತ್ತು ಬಾರಿ ಶಾಸಕರಾಗಿ ಸಾಂವಿಧಾನಿಕವಾಗಿ ಮತ್ತು ಲಿಂಗ ಸೂಕ್ಷ್ಮತೆಯ ಬಗ್ಗೆ ಇನ್ನೊಬ್ಬರಿಗೆ ಪಾಠ ಹೇಳುವ ಸ್ಥಾನದಲ್ಲಿದ್ದವರು ‘ನಿನಗೆ ಹೆರಿಗೆಗೆ ಸಮಸ್ಯೆಯಾದರೆ ಮಾಡಿಸಿಕೊಡುವೆ’ ಎಂದು ಬೇಜವಾಬ್ದಾರಿ ಹಾಗೂ ಮಹಿಳಾ ವಿರೋಧಿ ಮನಸ್ಥಿತಿಯಿಂದ ಮಾತನಾಡಿದ್ದು, ವರದಿಯಾಗಿದೆ. ಆ ವೀಡಿಯೋಗಳೂ ಎಲ್ಲೆಡೆ ಹರಿದಾಡುತ್ತಿವೆ. ಇವರ ಮಾತು ಮನುವಾದಿ, ಸ್ತ್ರೀವಿರೋಧಿ, ಪಾಳೆಗಾರಿ ಯಜಮಾನ್ಯದ ರಾಜಕಾರಣಿಗಳಲ್ಲಿ ಇರುವುದರ ಪ್ರತಿಬಿಂಬದಂತಿದೆ.
ಈ ಅನುಚಿತ ಹೇಳಿಕೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿ ಕೂಡಲೇ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಳ್ಳಬೇಕು. ಲಿಂಗ ತಾರತಮ್ಯದಿಂದ ಕೂಡಿದ ಹಾಗೂ ಮಹಿಳೆಯರ ನಾಗರಿಕ ಹಕ್ಕುಗಳನ್ನು ದಮನಿಸುವ, ಸ್ವಾಭಿಮಾನ ಹಾಗೂ ಘನತೆಯ ಬದುಕಿಗೆ ವಿರುದ್ಧವಾದ ಇಂತಹ ಮಾತುಗಳನ್ನು ಇಡೀ ಸಮಾಜದಿಂದಲೇ ನಿರ್ಮೂಲನೆ ಮಾಡಬೇಕಾದ ಮೂಲಭೂತ ಕರ್ತವ್ಯವನ್ನು ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ವಿಧಿಸಿದೆ ಅಂತಹವುದರಲ್ಲಿ ಹಿರಿಯ ರಾಜಕಾರಣಿ, ಮಾಜಿ ಸಚಿವರೂ ಆಗಿರುವ ಜವಾಬ್ದಾರಿ ಜನಪ್ರತಿನಿಧಿಯ ಈ ಅವಹೇಳನಕಾರಿ ಮಾತುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.
ಹೆಚ್ಚೆಚ್ಚು ಮಹಿಳೆಯರು ಮಾಧ್ಯಮ ರಂಗ ಸೇರಿದಂತೆ ಸಮಾಜದ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿರುವ ಹೊತ್ತಿನಲ್ಲಿ ಅವರ ಆಕಾಂಕ್ಷೆಗಳನ್ನು ತುಚ್ಚೀಕರಿಸುವ ಇಂತಹ ಮಾತುಗಳು ಸಮಾಜದ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತದೆ.
ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಇದು ಭಾರತದ ಯಾವುದೇ ನಾಗರಿಕರು ಒಪ್ಪುವ ಮಾತಲ್ಲ ಹಾಗೂ ಇದು ಅವರ ಘನತೆಗೆ ಕಳಂಕ ತರುವ ಮಾತಾಗಿರುವುದರಿಂದ ಈ ಕೂಡಲೇ ಆರ್.ವಿ. ದೇಶಪಾಂಡೆಯವರು ತಮ್ಮ ಮಾತಿಗಾಗಿ ಕ್ಷಮೆ ಕೇಳಬೇಕು. ಇನ್ನು ಮುಂದೆ ಇಂತಹ ಯಾವುದೇ ಅಸೂಕ್ಷ್ಮ ಮಾತಾನಾಡಕೂಡದೆಂದು ಜನವಾದಿ ಮಹಿಳಾ ಸಂಘಟನೆ ಆಗ್ರಹಿಸುತ್ತದೆ.
ಮಾತ್ರವಲ್ಲ ಜಿಲ್ಲೆಯ ಜನ ಜೀವನ ರಕ್ಷಣೆಗಾಗಿ ಎಷ್ಟೊಂದು ವರ್ಷಗಳಿಂದ ಬಹು ಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ನಡೆಯುತ್ತಿದ್ದರೂ ಅದರ ಈಡೇರಿಕೆಗಾಗಿ ಹಿರಿಯ ರಾಜಕಾರಣಿಗಳಾದ ತಮ್ಮ ಪ್ರಯತ್ನ ಸ್ವಲ್ಪವೂ ಸಾಕಾಗದು. ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ಕಾಮಗಾರಿ ಪೂರೈಸಿ ತಲೆ ಎತ್ತಿ ನಿಂತ ಆಸ್ಪತ್ರೆ ಜನರ ಉಪಯೋಗಕ್ಕೆ ಶೀಘ್ರವಾಗಿ ಬಳಕೆಯಾಗುವಂತೆ ಗಮನ ನೀಡದಿರುವುದು ಖೇದಕರ ಸಂಗತಿ ಎಂದು ಜನವಾದಿ ಮಹಿಳಾ ಸಂಘಟನೆ ಅಭಿಪ್ರಾಯ ಪಟ್ಟಿದೆ.