ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಉಪಾಧ್ಯಕ್ಷರಾದ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಮಂಗಳೂರಿಗೆ
ಮಂಗಳೂರು: ಮಂಗಳೂರು ರಾಮಕೃಷ್ಣ ಮಿಷನ್ 1951ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಕಳೆದ 75 ವರ್ಷಗಳಿಂದ ನಿರಂತರವಾಗಿ ಹತ್ತು ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸೇವೆಯಲ್ಲಿ ನಿರತವಾಗಿದೆ. ಇದೀಗ 75 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸುತ್ತಿರುವ ಮಂಗಳೂರಿನ ರಾಮಕೃಷ್ಣ ಮಿಷನ್‌ನ ಅಮೃತ ಮಹೋತ್ಸವ ಸೆ.14 ರಂದು ಆಚರಿಸಲಿದೆ.
ಈ ಸಂದರ್ಭದಲ್ಲಿ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್‌ನ ಉಪಾಧ್ಯಕ್ಷರಾದ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅವರು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಿಷನ್‌ಗೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 13, 14 ಹಾಗೂ 15 ರಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೆಪ್ಟೆಂಬರ್ 12 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್‌ನ ಕೇಂದ್ರ ಕಚೇರಿಯಿಂದ ವಿಮಾನದ ಮೂಲಕ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಸ್ವಾಮೀಜಿಯವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಲಾಗುವುದು. ನಂತರ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠಕ್ಕೆ ಆಗಮಿಸಿ ಸ್ವಾಮೀಜಿಯವರು ಅಲ್ಲಿ ವಾಸ್ತವ್ಯವಿರಲಿದ್ದಾರೆ.
ಸೆ.13 ರಂದು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳಿಗಾಗಿ ನಡೆಯಲಿರುವ ‘ಪ್ರಜ್ಞಾ-2025’ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಸೆ.14 ರಂದು ರಾಮಕೃಷ್ಣ ಮಿಷನ್‌ನ 75ನೇ ವರ್ಷದ ಸವಿನೆನಪಿಗಾಗಿ ನಿರ್ಮಾಣಗೊಂಡ ಅಮೃತಭವನದ ಲೋಕಾರ್ಪಣೆ ಹಾಗೂ ವಿವೇಕಾನಂದ ಅಧ್ಯಯನ ಕೇಂದ್ರದ ತರಗತಿ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಹಾಗೆಯೇ ಅಮೃತ ವರ್ಷದ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷದ ಕಾಲಾವಧಿಯಲ್ಲಿ ನಡೆಸಲಾಗುವ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಸೆ.16 ರಂದು ಹಿಂತಿರುಗಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.