ಧರ್ಮಸ್ಥಳ ತೇಜೋವಧೆ: ಕೇರಳ ರಾಜಕೀಯ ನಾಯಕನ ಖಾತೆಯಿಂದ ತಮಿಳುನಾಡು ಸಂಸದರ ತಾಯಿ ಖಾತೆಗೆ ಹಣ
ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ತೇಜೋವಧೆಗೆ ಸಂಬಂಧಿಸಿ ಕೇರಳದ ಪ್ರಭಾವಿ ರಾಜಕೀಯ ನಾಯಕನ ಖಾತೆಯಿಂದ ತಮಿಳುನಾಡು ಸಂಸದರೊಬ್ಬರ ತಾಯಿಯ ಖಾತೆಗೆ ಹಣ ರವಾನೆಯಾಗಿದೆ ಎಂದು ಹಿಂದು ಮುಖಂಡ ತೇಜಸ್ ಗೌಡ ಆರೋಪಿಸಿದ್ದಾರೆ.
ಧರ್ಮಸ್ಥಳದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಷಡ್ಯಂತ್ರದಲ್ಲಿ ಕೇರಳದ ಪ್ರಭಾವಿ ರಾಜಕಾರಣಿಯ ಕೈವಾಡವಿದೆ. ಅವರ ಬ್ಯಾಂಕ್ ಖಾತೆಯಿಂದ ತಮಿಳುನಾಡು ಸಂಸದರ ತಾಯಿಯ ಖಾತೆಗೆ ಹಣ ಹೋಗಿದೆ. ಫಂಡ್ ಇಲ್ಲದೆ ಯಾವ ಕೆಲಸವೂ ಮಾಡಲು ಆಗದು. ಗಿರೀಶ್ ಮಟ್ಟಣ್ಣವರ್‌ಗೆ ಹಲವು ಕಡೆಗಳಲ್ಲಿ ಆಸ್ತಿ ಇದೆ ಎನ್ನುತ್ತಾರೆ. ಅವರ ತಂಡದವರು ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ. ಯೂಟ್ಯೂಬರ್ ಸಮೀರ್‌ನ ಎಐ ವೀಡಿಯೋಗೆ ಲಕ್ಷಾಂತರ ರೂ. ಖರ್ಚು ಆಗುತ್ತದೆ. ಇದಕ್ಕೆಲ್ಲ ಫಂಡಿಂಗ್ ಇಲ್ಲದೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಫಂಡಿಂಗ್ ವಿಚಾರ ಗೊತ್ತಾದರೆ ಷಡ್ಯಂತ್ರ ಬಯಲಾಗುತ್ತದೆ. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ನಾನು ನೀಡಿದ ದೂರು ಸ್ವೀಕಾರ ಮಾಡಿದ್ದಾರೆ, ತನಿಖೆ ನಡೆಸುವ ಭರವಸೆ ನೀಡಿದ್ದಾರೆ.ಫಂಡಿಂಗ್ ಬಗ್ಗೆ ತನಿಖೆ ನಡೆಸುವಂತೆ ಈಗಾಗಲೇ ಇಡಿಗೆ ಕೂಡ ದೂರು ನೀಡಿದ್ದೇನೆ. ಎಸ್‌ಐಟಿ ದೂರಿನಲ್ಲಿ ಸ್ಥಳೀಯ ಫಂಡಿಂಗ್ ಬಗ್ಗೆ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದೇನೆ ಎಂದರು.
ಬುರುಡೆ ಪ್ರಕರಣದಲ್ಲಿ ಕೇರಳ ಲಿಂಕ್‌ಗೆ ಪೂರಕವಾಗಿ ಇದೀಗ ಮನಾಫ್‌ಗೆ ನೊಟೀಸ್ ಜಾರಿ ಮಾಡಿದ್ದಾರೆ. ಆತ ಧರ್ಮಸ್ಥಳದ ಬಗ್ಗೆ ಯೂಟ್ಯೂಬ್ ವೀಡಿಯೋ ಮಾಡಿ ವೈರಲ್ ಮಾಡಿದ್ದ. ಕೇರಳದಲ್ಲಿ ಈ ಪ್ರಕರಣದ ಬಗ್ಗೆ ಬೇರೆಯೇ ಅಭಿಪ್ರಾಯ ಸೃಷ್ಟಿಸಿದ್ದ ಎಂದಿದ್ದಾರೆ.