ಧರ್ಮಸ್ಥಳ ಬುರುಡೆಗೆ ತಿರುವು-ಬುರುಡೆ ನೀಡಿದ್ದು ಮಟ್ಟಣನವರ್: ಜಯಂತ್ ಹೇಳಿಕೆ
ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣ ಮತ್ತೆ ತಿರುವು ಪಡೆದುಕೊಂಡಿದೆ. ಚಿನ್ನಯ್ಯ ದೂರು ನೀಡುವಾಗ ತಂದಿರುವ ಬುರುಡೆಯನ್ನು ಚಿನ್ನಯ್ಯನಿಗೆ ನೀಡಿದ ಜಯಂತ್ ಟಿ. ಎಂಬ ಆರೋಪ ಇರುವಾಗಲೇ ಚಿನ್ನಯ್ಯನಿಗೆ ಬುರುಡೆ ನೀಡಿದ್ದು ಗಿರೀಶ್ ಮಟ್ಟಣ್ಣನವರ್ ಎಂದು ಎಸ್‌ಐಟಿ ಮುಂದೆ ಜಯಂತ್ ಹೇಳಿದ್ದಾನೆ ಎನ್ನಲಾಗಿದೆ.
ಈ ಹಿಂದೆ ಬುರುಡೆ ಕುರಿತು ಪ್ರತಿಕ್ರಿಯಿಸಿದ್ದ ಮಟ್ಟಣನವರ್ ‘ನಾನು ಬುರುಡೆ ತಂದಿಲ್ಲ, ಬುರುಡೆ ತಂದಿದ್ದು ಯಾರು ಎಂಬುದು ಗೊತ್ತಿಲ್ಲ ಎಂದಿದ್ದರು. ಇದೀಗ ಜಯಂತ್ ಹೇಳಿಕೆ ಬುರುಡೆಗೆ ಹೊಸ ತಿರುವು ನೀಡಿದೆ.
ಚಿನ್ನಯ್ಯ ತಂದ ಬುರುಡೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಬುರುಡೆ ಜೊತೆ ಇದ್ದ ಮಣ್ಣುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ಕ್ಕೆ ಪೊಲೀಸರು ಕಳುಹಿಸಿದ್ದರು. ಆದರೆ ಎಫ್‌ಎಸ್‌ಎಲ್ ವರದಿಯಂತೆ ಧರ್ಮಸ್ಥಳದ ಅಸುಪಾಸಿನಲ್ಲಿ ಇರುವ ಮಣ್ಣಿಗೂ ಬುರುಡೆಯಲ್ಲಿರುವ ಮಣ್ಣಿಗೂ ಸಾಮ್ಯತೆ ಇಲ್ಲ ಎನ್ನಲಾಗಿತ್ತು. ನಂತರ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಮಹಜರು ಮಾಡಲು ಬಂದಿದ್ದಾಗ ಚಿನ್ನಯ್ಯ ರಬ್ಬರ್ ತೋಟದ ಒಂದು ಜಾಗವನ್ನು ತೋರಿಸಿ ಇಲ್ಲಿಂದ ಬುರುಡೆ ತೆಗೆದಿರುವುದಾಗಿ ತಿಳಿಸಿದ್ದ. ಈತನ ಹೇಳಿಕೆಯಂತೆ ಪೊಲೀಸರು ರಬ್ಬರ್ ತೋಟದಿಂದ ಮಣ್ಣುಗಳನ್ನು ತೆಗೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ವರದಿಗಾಗಿ ಕಾಯಲಾಗುತ್ತಿದೆ.
ಚಿನ್ನಯ್ಯ ನಾಳೆ ನ್ಯಾಯಾಲಯಕ್ಕೆ..
ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಕಸ್ಟಡಿ ಅವಧಿ ಶನಿವಾರಕ್ಕೆ ಮುಕ್ತಾಯವಾಗಲಿದೆ. ಇಲ್ಲಿವರೆಗೆ ಚಿನ್ನಯ್ಯ ಒಟ್ಟು 15 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸಿದ್ದಾನೆ. ಈ ವೇಳೆ ಆತನಿಂದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಮಹತ್ವದ ಮಾಹಿತಿಗಳನ್ನು ಕಲೆಹಾಕುವಲ್ಲಿ ಎಸ್‌ಐಟಿ ತಂಡ ಯಶಸ್ವಿಯಾಗಿದೆ. ಚಿನ್ನಯ್ಯನನ್ನು ಬೆಂಗಳೂರು ಹಾಗೂ ಉಜಿರೆಯ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮಹಜರು ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತನಿಖೆಯ ಬಗ್ಗೆಯೂ ಇಂದು ಬೆಳ್ತಂಗಡಿಗೆ ಭೇಟಿ ನೀಡಿದ್ದ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಚರ್ಚೆ ನಡೆಸಿದ್ದಾರೆ.
ಚಿನ್ನಯ್ಯನನ್ನು ಶನಿವಾರ ಎಸ್‌ಐಟಿ ಅಧಿಕಾರಿಗಳು ಮತ್ತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಚಿನ್ನಯ್ಯನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸುವ ಸಾಧ್ಯತೆ ಇದೆ.