ಧರ್ಮಸ್ಥಳ ಪ್ರಕರಣ: ಬುರುಡೆ ತರುವ ವಿಡಿಯೋ ಮಾಡಿದ ಕೇರಳದ ಯುಟ್ಯೂಬರ್‌ಗೆ ಎಸ್‌ಐಟಿ ನೋಟಿಸ್
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿ ಬಂಧಿತನಾಗಿರುವ ಚಿನ್ನಯನನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ಚಿನ್ನಯ್ಯ ದೂರು ನೀಡುವಾಗ ತಂದಿದ್ದ ಬುರುಡೆಯ ಹಿಂದಿರುವ ರಹಸ್ಯವನ್ನು ಶೋಧಿಸುತ್ತಿದೆ. ಇದೀಗ ಯುಟ್ಯೂಬ್‌ನಲ್ಲಿ ಬುರುಡೆ ತೆಗೆಯುವ ವಿಡಿಯೋ ಪ್ರಸಾರ ಮಾಡಿದ ಕೇರಳದ ಯುಟ್ಯೂಬರ್ ಮನಾಫ್ ವಿಚಾರಣೆಗೆ ಮುಂದಾಗಿದೆ. ವಿಚಾರಣೆಗೆ ಹಾಜರಾಗುವಂತೆ ಮನಾಫ್‌ಗೆ ಎಸ್‌ಐಟಿ ನೋಟಿಸ್ ನೀಡಿದೆ ಎನ್ನಲಾಗಿದೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಎಸ್‌ಐಟಿ ತಂಡ ರಚನೆಯಾಗುವ ಮೊದಲು ಧರ್ಮಸ್ಥಳಕ್ಕೆ ಆಗಮಿಸಿ ಹಲವು ವೀಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಮನಾಫ್, ತನ್ನ ಯೂಟ್ಯೂಬ್‌ನಲ್ಲಿ ಬುರುಡೆ ತೆಗೆಯುವ ವಿಡಿಯೋ ಪ್ರಸಾರ ಮಾಡಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬುರುಡೆ ರಹಸ್ಯ..
ಚಿನ್ನಯ ತಂದ ಬುರುಡೆ ಚಿದಂಬರರ ರಹಸ್ಯವಾಗಿತ್ತು. ಬುರುಡೆ ಯಾರದ್ದು, ಎಲ್ಲಿಂದ ತಂದಿರುವುದು ಎಂಬ ವಿಚಾರಣೆ ನಡೆಯುತ್ತಲೇ ಇತ್ತು. ಆದರೆ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಚಿನ್ನಯ್ಯ ತಂದಿದ್ದ ಬುರುಡೆಯನ್ನ ಬಂಗ್ಲೆಗುಡ್ಡೆಯಿಂದ ತಂದಿರುವುದಾಗಿ ಜಯಂತ್ ಹೇಳಿದ್ದರು, ಚಿನ್ನಯ್ಯನಿಗೆ ಬುರುಡೆ ನೀಡಿದವರು ಜಯಂತ್ ಎಂಬ ಆರೋಪವೂ ಇತ್ತು. ಅರಣ್ಯದಲ್ಲಿ ಭೂಮಿಯ ಮೇಲ್ಭಾಗದಲ್ಲಿ ಇದ್ದ ಬುರುಡೆಯನ್ನು ತರಲಾಗಿತ್ತು ಎನ್ನಲಾಗಿದೆ. ಕಾಡಿನಲ್ಲಿ ಒಂದು ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಬುರುಡೆ ಪತ್ತೆ ಆಗಿದೆ. ಬುರುಡೆಯನ್ನು ಮೇಲೆತ್ತುಕೊಳ್ಳಬೇಕಾದರೆ ಕತ್ತಿಯನ್ನು ಬಳಕೆ ಮಾಡಿ ಅದನ್ನು ಚೀಲದಲ್ಲಿ ಹಾಕಿಕೊಳ್ಳಲಾಗಿದೆ. ಇದನ್ನು ತರುವ ವಿಡಿಯೋವನ್ನು ಮನಾಫ್ ಮಾಡಿದ್ದು ಇದನ್ನು ಪ್ರಸಾರ ಮಾಡಲಾಗಿದೆ. ಜು.11 ರಂದು ಈ ವಿಡಿಯೋ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿತ್ತು.
ಮನಾಫ್ ಯಾರು?
ಕಳೆದ ವರ್ಷ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬದಿಯ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು. ಈ ದುರ್ಘಟನೆಯಲ್ಲಿ ಲಾರಿ ಚಾಲಕ ಅರ್ಜುನ್ ಲಾರಿ ಸಹಿತ ನದಿಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ, ನಂತರ ಲಾರಿಯೊಂದಿಗೆ ಆತನ ಮೃತದೇಹ ದೊರೆತಿತ್ತು. ಈ ಮನಾಫ್ ಅದೇ ಲಾರಿಯ ಮಾಲಕ ಹಾಗೂ ಕೇರಳ ಭಾಗದ ಯೂಟ್ಯೂಬರ್ ಕೂಡ. ಪ್ರಕರಣ ಆರಂಭಕ್ಕೂ ಮೊದಲೇ ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಸುತ್ತಮುತ್ತ ಓಡಾಡಿದ್ದ. ಮಹೇಶ್ ತಿಮರೋಡಿ ಮನೆಗೂ ಭೇಟಿದ್ದ ಎನ್ನಲಾಗಿದೆ.
ಮಟ್ಟೆಣ್ಣನವರ್ ವಿಚಾರಣೆ...
ಧರ್ಮಸ್ಥಳ ಪ್ರಕರಣದಲ್ಲಿ ಗಿರೀಶ್ ಮಟ್ಟೆಣ್ಣನವರ್ ನವರನ್ನು ಎಸ್‌ಐಟಿ ವಿಚಾರಣೆ ನಡೆಸಿದೆ. ಚಿನ್ನಯ್ಯ ಮತ್ತು ಜಯಂತ್ ಹೇಳಿಕೆಗಳ ಆಧಾರದ ಮೇಲೆ ದೆಹಲಿ ಪ್ರಯಾಣ, ತಾಂತ್ರಿಕ ಸಾಕ್ಷ್ಯಗಳನ್ನು ಮುಂದಿಟ್ಟು ತನಿಖೆ ನಡೆಯುತ್ತಿದೆ. ಯೂಟ್ಯೂಬರ್ ಅಭಿಷೇಕ್ ಕಳೆದ ಮೂರು ದಿನಗಳಿಂದ ಎಸ್‌ಐಟಿ ವಿಚಾರಣೆ ಎದುರಿಸುತ್ತಿದ್ದಾರೆ. ಜಯಂತ್ ಟಿ. ಗುರುವಾರ ಸಂಜೆ ವಿಚಾರಣೆಗಾಗಿ ಆಗಮಿಸಿದ್ದು ಅವರ ವಿಚಾರಣೆ ಮುಂದುವರೆದಿದೆ.
ಮೊಹಂತಿ ಆಗಮನ...
ಎಸ್.ಐ.ಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಸೆ.೫ರಂದು ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್.ಐ.ಟಿ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಸಾಕ್ಷಿ ದೂರುದಾರ ಚಿನ್ನಯ್ಯ ತಂದಿರುವ ಬುರುಡೆ ವಿಚಾರಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಮೊಹಂತಿ ಮಟ್ಟೆಣ್ಣನವರ್, ಜಯಂತ್, ಅಭಿಷೇಕ್‌ನನ್ನು ಮತ್ತೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.