
ಚಿನ್ನಯ್ಯ ಎರಡು ವರ್ಷದ ಹಿಂದೆಯೇ ತಿಮರೋಡಿ ಅವರನ್ನು ಭೇಟಿ ಮಾಡಿದ್ದೆ ಎನ್ನುವ ವಿಡಿಯೋ ವೈರಲ್
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂತಿದ್ದೇನೆ ಎಂದು ಆರೋಪಿಸಿ ಈಗ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯ ಎರಡು ವರ್ಷದ ಹಿಂದೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾನೆ ಎನ್ನಲಾದ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಚಿನ್ನಯ್ಯ ಮತ್ತು ಆತನ ಪತ್ನಿ ಇವರು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ತೆರಳಿ ಅಲ್ಲಿ ಮಾತುಕತೆ ನಡೆಸುತ್ತಿರುವ ವಿಡಿಯೋ ತುಣುಕು ಸದ್ಯ ವೈರಲ್ ಆಗುತ್ತಿದೆ. ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಪೊಲೀಸರಿಗೆ ಸಿಗದೆ ತಿಮರೋಡಿ ತಲೆಮರೆಸಿಕೊಂಡಿರುವ ಬೆನ್ನಲ್ಲೇ ಎರಡು ವರ್ಷ ಹಿಂದಿನದ್ದು ಎನ್ನಲಾದ ಈ ವಿಡಿಯೋವನ್ನು ಬುರುಡೆ ಗ್ಯಾಂಗ್ ಜಾಲತಾಣಗಳಿಗೆ ಹರಿಯಬಿಟ್ಟಿದೆ. ಪ್ರಸ್ತುತ ಚಿನ್ನಯ್ಯ ಶಿವಮೊಗ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಸುಮಾರು 2.58 ನಿಮಿಷದ ಈ ವಿಡಿಯೋದಲ್ಲಿ ಚಿನ್ನಯ್ಯ ಮತ್ತು ಆತನ ಪತ್ನಿ ಒಟ್ಟಿಗೆ ಕುಳಿತುಕೊಂಡಿದ್ದು, ಮಹೇಶ್ ಶೆಟ್ಟಿ ತಿಮರೋಡಿ ಜೊತೆ ಮಾತನಾಡುವ ವಿಡಿಯೋ ತುಣಕು ಇದೆ.
ನೇತ್ರಾವತಿ ಸ್ನಾನ ಘಟ್ಟ ಬಳಿ ನಾನು ಹೆಣಗಳನ್ನು ಹೂಳುತ್ತಿದ್ದೆ. ಅದನ್ನು ಸರ್ಕಾರಿ ಜಾಗ ಎಂದವರಿಗೆ ರಕ್ತ ಬರುವಂತೆ ನನ್ನಿಂದ ಹೊಡೆಸುತ್ತಿದ್ದರು. ಒಂದು ಹೆಣ ಹೂಳುವಾಗ ವೈದ್ಯರು ಬಾರದೆ ಕಂಪೌಂಡರ್ ಪೋಸ್ಟ್ ಮಾರ್ಟಂ ಮಾಡಿದ್ದರು. ಸೌಜನ್ಯ ಅತ್ಯಾಚಾರ, ಕೊಲೆ ವಿಚಾರದಲ್ಲಿ ನಾವು ಬೇರೆ ಕಡೆ ಮಾತನಾಡುತ್ತೇವೆ ಎಂದು ನಮ್ಮನ್ನು ಜಾಗ ಖಾಲಿ ಮಾಡಿಸಿದ್ದರು. ನನಗೆ 3.50 ಲಕ್ಷ ರೂ. ಮೊತ್ತವನ್ನು ವ್ಯಕ್ತಿಯೊಬ್ಬರು ಕೊಡಬೇಕಾಗಿತ್ತು. 500 ರೂ.ಗಳ ನೋಟಿನ ಐದು ಕಟ್ಟು ತಂದು ಅದರಲ್ಲಿ ಸ್ವಲ್ಪ ಮಾತ್ರ ನೀಡಿ ನಮ್ಮ ಜಾಗ ಖಾಲಿ ಮಾಡಿಸಿದ್ದರು. ನಮಗೆ ತುಂಬಾ ಅನ್ಯಾಯ ಮಾಡಿದರು ಎಂದು ತಿಮರೋಡಿ ಬಳಿ ಚಿನ್ನಯ್ಯ ಹೇಳಿಕೊಳ್ಳುತ್ತಿರುವುದು ವಿಡಿಯೋ ತುಣುಕಿನಲ್ಲಿದೆ. ಈ ವಿಡಿಯೋದ ಸತ್ಯಾಸತ್ಯತೆ ದೃಢಪಟ್ಟಿಲ್ಲ.