ಸಾಮಾಜಿಕ ಜವಾಬ್ದಾರಿ ಕವಿಗಳ ಆಶಯವಾಗಬೇಕು: ಕವಿ ವಿಲ್ಸನ್ ಕಟೀಲು

ಸಾಮಾಜಿಕ ಜವಾಬ್ದಾರಿ ಕವಿಗಳ ಆಶಯವಾಗಬೇಕು: ಕವಿ ವಿಲ್ಸನ್ ಕಟೀಲು


ಮಂಗಳೂರು: ಇವತ್ತಿನ ಸಂದರ್ಭದಲ್ಲಿ ಕವಿಗಳಿಗೆ ಸಾಮಾಜಿಕ ಜಾಲತಾಣ ಸೇರಿದಂತೆ ಬರೆಯಲು ಅನೇಕ ಅವಕಾಶಗಳು ಇವೆ. ಆದರೆ ಬರಹಗಾರನು ಸಾಮಾಜಿಕ ಜವಬ್ದಾರಿಯ ಧ್ವನಿಯಾಗಿ ಶೋಷಣೆಯ ವಿರುದ್ಧ ಬರೆದಾಗಲೇ ಒಳ್ಳೆಯ ಕವಿತೆ ಸೃಷ್ಟಿಯಾಗಲು ಸಾಧ್ಯ ಎಂದು ಬಹುಭಾಷಾ ಕವಿ ವಿಲ್ಸನ್ ಕಟೀಲು ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್ ಹಾಗೂ ಮಯೂರಿ ಫೌಂಡೇಶನ್ ಜಂಟಿಯಾಗಿ ಉರ್ವಾಸ್ಟೋರಿನ ತುಳುಭವನದಲ್ಲಿ ಹಮ್ಮಿಕೊಂಡ ೫ನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಸನ್ನಿವೇಶದಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಗೂ ಸಾಮರಸ್ಯವನ್ನು ಕಾಪಾಡಲು ತುಳುನಾಡಿನ ಪಾಡ್ದನಗಳಲ್ಲಿ ಉಲ್ಲೇಖ ಮಾಡಿರುವ ಸತ್ಯ, ನ್ಯಾಯ, ಧರ್ಮದ ಆಶಯಗಳು ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು, ಮಾಹಾತ್ಮ ಗಾಂಧಿ, ಬಸವಣ್ಣ ಅವರಂತ ದಾರ್ಶನಿಕರ ಆದರ್ಶಗಳನ್ನು ನಮ್ಮ ಪರಿಸರದ ಹಾಗೂ ನಮ್ಮ ಊರಿನ ಭಾಷೆಗಳ ಮೂಲಕ ಅಭಿವ್ಯಕ್ತಪಡಿಸುವ ತುರ್ತು ಅಗತ್ಯ ಇದೆ ಎಂದು ವಿಲ್ಸನ್ ಕಟೀಲು ಅಭಿಪ್ರಾಯಪಟ್ಟರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಮಲಾರ್ ಜಯರಾಮ್ ರೈ ಮಾತನಾಡಿ, ತುಳು ಎಲ್ಲರೂ ಪ್ರೀತಿಸುವ ಭಾಷೆ ಹಾಗೂ ತುಳು ತುಳುನಾಡಿನ ಎಲ್ಲಾ ಭಾಷೆಗಳಿಗೂ ಪೋಷಕ ಸ್ಥಾನದಲ್ಲಿರುವ ಮತ್ತು ಕರಾವಳಿಯ ಎಲ್ಲಾ ಒಡನಾಡಿ ಭಾಷೆಗಳನ್ನು ಬೆಳೆಸುವ ಭಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳುನಾಡಿನ ಹದಿನಾಲ್ಕು ಭಾಷೆಗಳ ಕವಿಗಳನ್ನು ಒಟ್ಟು ಸೇರಿಸುವ ಮೂಲಕ ಭಾಷಾ ಸಾಮರಸ್ಯದ ಆಶಯವನ್ನು ಬಿಂಬಿಸುವ ಸಲುವಾಗಿ ಹಾಗೂ ಸಣ್ಣ ಸಮುದಾಯಗಳ ಒಳಗಿನ ಭಾಷೆಗಳಿಗೆ ಆದ್ಯತೆ, ಗೌರವ ನೀಡುವ ಸಲುವಾಗಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಭಾಷೆಯವರನ್ನು ಒಂದುಗೂಡಿಸುವ ಹಿನ್ನೆಲೆಯಲ್ಲಿ ಅಕಾಡೆಮಿಯು ಬಹುಭಾಷಾ ಕವಿಗೋಷ್ಠಿ ಹಮ್ಮಿಕೊಂಡಿತು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ. ಶೆಟ್ಟಿ ಮುಂಬಯಿ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಎ.ಸಿ. ಭಂಡಾರಿ ಉಪಸ್ಥಿತರಿದ್ದರು.

ಬಹುಭಾಷಾ ಕವಿಗಳಾದ ಚೆನ್ನಪ್ಪ ಅಳಿಕೆ (ತುಳು), ಮಂಜುಳಾ ಶೆಟ್ಟಿ (ತುಳು), ಸತೀಶ್ ಪಡುಬಿದ್ರಿ (ಕೊರಗ ಭಾಷೆ), ಸದಾನಂದ ನಾರಾವಿ (ಕನ್ನಡ), ಕವಿತಾ ಅಡೂರು (ಶಿವಳ್ಳಿ ತುಳು), ರತ್ನಾ ಕೆ. ಭಟ್ ತಲಂಜೇರಿ (ಹವ್ಯಕ ಕನ್ನಡ), ಕರುಣಾಕರ್ ಬಳ್ಕೂರು (ಕುಂದಗನ್ನಡ) ಶಮೀಮಾ ಕುತ್ತಾರ್ (ಬ್ಯಾರಿ), ಉದಯ ಭಾಸ್ಕರ್(ಅರೆಭಾಷೆ), ಡಾ. ಮೀನಾಕ್ಷಿ ರಾಮಚಂದ್ರ (ಮಲೆಯಾಳಂ), ಬಾಲಕೃಷ್ಣ ಬೇರಿಕೆ (ಮರಾಠಿ) ರಾಧಿಕಾ ಪೈ(ಕೊಂಕಣಿ) ಚಂದ್ರಕಾಂತ್ ಗೋರೆ( ಚಿತ್ಪಾವನಿ), ಮೀರಾ ಭಟ್ (ಕರಾಡ) ಕವಿತೆ ವಾಚಿಸಿದರು.

ತುಳು ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ, ಸದಸ್ಯೆ ಅಕ್ಷಯ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಾಗೂ ಸದಸ್ಯ ಬಾಬು ಕೊರಗ ಪಾಂಗಾಳ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article