ಸುಳ್ಳು ಸುದ್ದಿ/ಸಂದೇಶ/ಪೋಸ್ಟ್ ರವಾನೆ: ಜಿಲ್ಲೆಗೆ ಕಪ್ಪು ಚುಕ್ಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಜನರು ಬೇರೆ ಬೇರೆ ವಿಚಾರಗಳಲ್ಲಿ ಸತ್ಯವನ್ನು ಮರೆಮಾಚಿ ಸುಳ್ಳು ಸುದ್ದಿ ಪ್ರಚಾರ ಮಾಡಿ ಸಮಾಜಕ್ಕೆ ತಪ್ಪು ಸಂದೇಶ ನೀಡುತಗತಿದ್ದಾರೆ. ಜನರನ್ನು ಪ್ರಚೋದನೆಗೊಳ್ಳುವಂತೆ ಮಾಡಿ, ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತೆ ಮಾಡುತ್ತಿದ್ದು ಇದರಿಂದ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಡುವಂತೆ ಮಾಡುತ್ತಿದ್ದು, ಈ ಸಂಬಂಧ ಈಗಾಗಲೇ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.
ಸುಳ್ಳು ಸುದ್ದಿ ಅಥವಾ ಪ್ರಚೋದನಾಕಾರಿ ಸಂದೇಶಗಳನ್ನು ಜಿಲ್ಲೆಯ ಜನರು ನಂಬಬಾರದು. ಅಂತಹ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ನೀಡದೆ, ಅಂತಹ ವ್ಯಕ್ತಿಗಳು/ಸಂಘಟನೆಗಳನ್ನು ಕಡೆಗಣಿಸಿದಾಗ ಮಾತ್ರ ಅವುಗಳನ್ನು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಅಥವಾ ಪೋಸ್ಟ್ ಹಂಚುವ ಮುಂಚೆ, ಅದರ ನೈಜತೆಯನ್ನು ಪರಿಶೀಲಿಸುವಂತೆ ಜಿಲ್ಲಾ ಪೊಲೀಸರು ವಿನಂತಿಸಿದ್ದಾರೆ.
ಅಂತಹ ಪ್ರಕರಣಗಳ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
1) ಒಂದು ಫೇಸ್‌ಬುಕ್ ಖಾತೆಯಲ್ಲಿ ಮೃತ ಅಬ್ದುಲ್ ರಹಿಮಾನ್‌ಗೆ ಸಂಬಂಧಿಸಿದಂತೆ ‘ಅಕ್ರಮ ಸಂಬಂಧಕ್ಕೆ ಕೊಲೆ ಆದ ಕಾಮುಕನ ಪರ ಇಡೀ ಸಮುದಾಯದ ಜನ ನಿಂತಿದ್ದಾರೆ’ ಎಂದು ಪ್ರಚೋದನಾಕಾರಿ ಪೋಸ್ಟ್ ಅನ್ನು ಹರಿಬಿಟ್ಟಿದ್ದರು. ಇದು ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟಿಸಿ ಸಮುದಾಯಗಳ ನಡುವೆ ವೈಮನಸ್ಸು ಉಂಟು ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತೆ ಮಾಡಿದ್ದು, ಈ ಸಂಬಂಧ ವೇಣೂರು ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬಳಿಕ ಈ ಮೇಲಿನ ವಿಷಯಗಳ ಬಗ್ಗೆ ತನಿಖೆಯಲ್ಲಿ ಸುಳ್ಳು ಎಂದು ಕಂಡುಬಂದಿತ್ತು.
2) ದಿನಾಂಕ 11.06.2025 ರಂದು ಬೆಳಗ್ಗೆ ಉಮರ್ ಪಾರೂಕ್ ನಂದಾವರ ಎಂಬವರು ತನ್ನ ಟಾಟಾ ಜೀಪ್ ವಾಹನದಲ್ಲಿ ಹೊರಟು ದೇರಳಕಟ್ಟೆ ಕಡೆ ಹೋಗುತ್ತಿದ್ದಾಗ ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಹತ್ತಿರ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಬಂದು ತಲವಾರಿನಿಂದ ಬೀಸಿ, ಕೊಲೆಗೆ ಪ್ರಯತ್ನಿಸಿರುವುದಾಗಿದೆ ಎಂದು ದೂರು ನೀಡಲಾಗಿತ್ತು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ :68/2025 ಕಲಂ: 109, 324(4) ಜೊತೆ 3(5) BNS-2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿ ಉಮರ್ ಫಾರೂಕ್ ರವರು ಉದ್ದೇಶದಿಂದ ಸುಳ್ಳು ದೂರು ನೀಡಿರುವುದು ತಿಳಿದುಬಂದಿರುತ್ತದೆ. ಸುಳ್ಳು ದೂರನ್ನು ನೀಡಿದ ಬಗ್ಗೆ ಉಮರ್ ಫಾರೂಕ್ ಅವರ ಮೇಲೆ ಪ್ರಕರಣವನ್ನು ದಾಖಲಿಸಿದ್ದು ತನಿಖೆ ಕೈಗೊಂಡಿದ್ದು ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
3) ಅಶ್ರಫ್ ತಲಪಾಡಿ ಎಂಬವರು ದೂರು ಕೊಟ್ಟ ಸಂತ್ರಸ್ಥನ ಮೇಲೆಯೇ ಸುಳ್ಳು ಕೇಸ್ ಹಾಕಿ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆಂದು ಗಲಭೆ ಏಳುವಂತೆ ಪ್ರಚೋದಿಸಿ, ದ್ವೇಷ ಭಾವನೆಯನ್ನು ಮೂಡುವಂತೆ ಮಾಡಿದ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ ನಂಬ್ರ 130/2025 ಕಲಂ 192, 353(1), (?), 353(2), 2.2.2 ತನಿಖೆಯಲ್ಲಿರುತ್ತದೆ.
4) ದಿನಾಂಕ:20.08.2025 ರಂದು ಸಂಜೆ ೧೯.೫೦ ಗಂಟೆಗೆ ಪಿರ್ಯಾದಿದಾರರು ಬಸ್ಸಿನಿಂದ ಇಳಿದು ಪಾಣೆಮಂಗಳೂರು ರೈಸ್ ಮಿಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ ಸ್ಕೂಟರನಲ್ಲಿ ಬಂದ ವ್ಯಕ್ತಿ ಮೈಗೆ ಕೈ ಹಾಕಿದ್ದರು. ಈ ಸಂಬಂಧ ಬಂಟ್ವಾಳ ನಗರ ಠಾಣೆ ಅ.ಕ್ರ ನಂಬ್ರ 95/2025 ಕಲಂ: 74 ಬಿ.ಎನ್ .ಎಸ್ 2023 ರಂತೆ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಉದ್ದೇಶದಿಂದ ಅನ್ಯ ಸಮುದಾಯದ ವ್ಯಕ್ತಿ ಈ ಕೃತ್ಯವೆಸಗಿದ್ದಾರೆಂದು ಸುಳ್ಳು ಪ್ರಚಾರ ಮಾಡಿ ಸಾಮರಸ್ಯವನ್ನು ಕೆಡಿಸಲು ಪ್ರಯತ್ನಿಸಿದ್ದು, ತನಿಖೆಯ ಸಂದರ್ಭ ಈ ಕೃತ್ಯವನ್ನು ಅದೇ ಸಮುದಾಯದ ಬಾಲಾಪರಾಧಿ ಮಾಡಿದ್ದು ಬಾಲಾಪರಾಧಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
5) ದಿನಾಂಕ: 05-07-2025 ರಂದು ಪುತ್ತೂರು ಕಸಬಾ ಗ್ರಾಮದ ಬೀರುಮಲೆ ಬೆಟ್ಟ ಬಳಿ ಹುಡುಗ ಮತ್ತು ಹುಡುಗಿ ಇಬ್ಬರು ಕುಳಿತಿರುವ ಸಮಯ ಅಪರಿಚಿತ ವ್ಯಕ್ತಿಗಳು ಏಕಾಏಕಿ ಅಕ್ರಮವಾಗಿ ಇವರನ್ನು ತಡೆದು ನಿಲ್ಲಿಸಿ, ಹುಡುಗನಿಗೆ ನೀನು ಬ್ಯಾರಿಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಸಂಬಂಧ ಪುತ್ತೂರು ಪುತ್ತೂರು ನಗರ ಠಾಣೆ ಅ.ಕ್ರ: 54/2025 ಕಲಂ:
126(2), 352, 351(2), 353(1)(C), 57, 196(1)(a) 3 3(5) BNS 2023 ತನಿಖೆಯಲ್ಲಿ ಒಂದೇ ಸಮುದಾಯಕ್ಕೆ ಸೇರಿದವರೆಂದು ತಿಳಿದುಬಂದಿರುತ್ತದೆ.
6) ದಿನಾಂಕ: 14-07-2025 ರಂದು ಬೊಳುವಾರು ಮಸೀದಿ ಬಳಿ ವ್ಯಕ್ತಿಯೊಬ್ಬ ತಲವಾರನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ತಿರುಗಾಡುತ್ತಿದ್ದ ಸಂಬಂಧ ರಾಜು ಸಕಲೇಶಪುರ ರವರ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಶ್ರಫ್ ಬಾವು ಪುತ್ತೂರು ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಾಡಹಗಲೇ ತಲವಾರು ಹಿಡಿದುಕೊಂಡು ಮಸೀದಿಯೊಳಗೆ ನುಗ್ಗಲು ಯತ್ನಿಸಿದ್ದು, ಹಿಂದು ಮುಖಂಡ ದ್ವೇಷ ಭಾಷಣದಿಂದಲೇ ಪ್ರೇರಿತಗೊಂಡು ಇಂತಹ ಕೃತ್ಯದ ನಡೆಸುತ್ತಿರುವುದಾಗಿ ಧರ್ಮ ಧರ್ಮಗಳ ನಡುವೆ ವೈಮನಸ್ಸು, ದೋಷ ಉಂಟಾಗುವಂತೆ ರೀತಿಯಲ್ಲಿ ಸುಳ್ಳು ಸುದ್ದಿ ಹರಡಿಸಿದ ಸಂಬಂಧ ಪುತ್ತೂರು ನಗರ 68/2025 ರಂದು ಕಲಂ 240, 353 (2) ರಂತೆ ಪ್ರಕಣ ದಾಖಲಾಗಿ ತನಿಖೆಯಲ್ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.