ಧರ್ಮಸ್ಥಳ ಪ್ರಕರಣ-ಮತ್ತೆರಡು ತಲೆಬುರುಡೆ ಪತ್ತೆ: ಒಟ್ಟು ಏಳು ತಲೆಬುರುಡೆ, ಮೂಳೆಗಳ ವಶಕ್ಕೆ ಪಡೆದ ಎಸ್‌ಐಟಿ

ಧರ್ಮಸ್ಥಳ ಪ್ರಕರಣ-ಮತ್ತೆರಡು ತಲೆಬುರುಡೆ ಪತ್ತೆ: ಒಟ್ಟು ಏಳು ತಲೆಬುರುಡೆ, ಮೂಳೆಗಳ ವಶಕ್ಕೆ ಪಡೆದ ಎಸ್‌ಐಟಿ


ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಬಂಗ್ಲೆಗುಡ್ಡೆಯಲ್ಲಿ ಎರಡನೇ ದಿನದ ಶೋಧ ಕಾರ್ಯಾಚರಣೆ ನಡೆಸಿದ್ದು, ಎರಡು ತಲೆಬುರುಡೆಗಳು ಹಾಗೂ ಮೂಳೆಗಳನ್ನು ವಶಕ್ಕೆ ಪಡೆದಿದೆ.

ಒಟ್ಟು ಎರಡು ದಿನಗಳ ಕಾರ್ಯಾಚರಣೆಯಲ್ಲಿ 7 ತಲೆ ಬುರುಡೆಗಳು ಹಾಗೂ ಬಹಳಷ್ಟು ಮೂಳೆಗಳು ನೆಲದ ಮೇಲೆ ಸಿಕ್ಕಿವೆ. ಒಟ್ಟು 9 ಕಡೆ ಮೃತದೇಹಗಳ ಅವಶೇಷಗಳು ಕಂಡುಬಂದಿದ್ದವು. ಅವುಗಳ ಪೈಕಿ ಐದು ಸ್ಥಳಗಳಲ್ಲಿ ಸಿಕ್ಕಿದ್ದ ಐದು ತಲೆ ಬುರುಡೆಗಳು ಹಾಗೂ ನೂರಾರು ಮೂಳೆಗಳನ್ನು ಬುಧವಾರವೇ ಎಸ್‌ಐಟಿ ವಶಕ್ಕೆ ಪಡೆದಿತ್ತು. ಪತ್ತೆಯಾಗಿರುವ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿದೆ. 

ಪತ್ತೆಯಾದ ತಲೆಬುರುಡೆ ಮತ್ತು ಮಾನವನ ಅಸ್ಥಿಪಂಜರವನ್ನು ಪ್ಲಾಸ್ಟಿಕ್ ಡಬ್ಬ ಹಾಗೂ ಪೈಪ್‌ಗಳಲ್ಲಿ ತುಂಬಿಸಿ ಎಸ್‌ಐಟಿ ತಂಡ ತೆಗೆದುಕೊಂಡಿದೆ. ವಾಕಿಂಗ್ ಸ್ಟಿಕ್ ಸಹಿತ ಸ್ಥಳದಲ್ಲಿ ಸಿಕ್ಕಿದ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ಅಲ್ಲಲ್ಲಿ ಹರಡಿಕೊಂಡ ಸ್ಥತಿಯಲ್ಲಿ ಪತ್ತೆಯಾದ ಅಸ್ಥಿಪಂಜರದ ಅವಶೇಷಗಳು ಬುರುಡೆ ಹಾಗು ಅಸ್ಥಿಪಂಜರ ದೊರೆತ ಸ್ಥಳಗಳನ್ನು ಅಧಿಕಾರಿಗಳು ಮಾರ್ಕಿಂಗ್ ಮಾಡಿದ್ದಾರೆ. ಮಾರ್ಕಿಂಗ್ ಮಾಡಿರುವ ಸ್ಥಳಗಳನ್ನು ಸೀಲ್ ಮಾಡಲಾಗಿದ್ದು, ಮಹಜರ್ ಪ್ರಕ್ರಿಯೆ ಮುಗಿಸಿ ಎಲ್ಲ ಅವಶೇಷಗಳನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದಿದ್ದು, ಗುರುವಾರ ಸಂಜೆ ವರೆಗೂ ಈ ಎಲ್ಲ ಪ್ರಕ್ರಿಯೆ ನಡೆದಿದೆ.

ಎಸ್‌ಐಟಿ ತಂಡ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆಕಾಡಿನೊಳಕ್ಕೆ ತೆರಳಿದ್ದು, ಮಧ್ಯಾಹ್ನ 3.30ರ ಸುಮಾರಿಗೆ ಹೊರ ಬಂದಿದೆ. ಎಸ್‌ಐಟಿಯ ಎಸ್ಪಿಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ.ಸೈಮನ್, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಬೆಳ್ತಂಗಡಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು, ಧರ್ಮಸ್ಥಳ ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು. ಇಂದಿನ ಕಾರ್ಯಾಚರಣೆ ಮುಗಿದಿದ್ದು, ನಾಳೆಯೂ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆಗಳಿವೆ


ಗುರುತು ಪತ್ತೆ..

ಬುಧವಾರ ಎಸ್‌ಐಟಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾದ ಪುರುಷನ ಅಸ್ಥಿಪಂಜರದ ಗುರುತು ಪತ್ತೆಯಾಗಿದೆ.ಕೊಡಗು ಮೂಲದ ಅಯ್ಯಪ್ಪ ಎಂಬವರಿಗೆ ಸೇರಿದ ಐಡಿ ಕಾರ್ಡ್ ಅದಾಗಿದ್ದು, ಅವರು ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದವರಾಗಿದ್ದು, ಏಳು ವರ್ಷಗಳ ಹಿಂದೆ ಮೈಸೂರಿಗೆ ಹೋದವರು ನಾಪತ್ತೆಯಾದ ಬಗ್ಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.


ನ್ಯಾಯಾಲಯಕ್ಕೆ ಚಿನ್ನಯ್ಯ ಹಾಜರು..

ಬುರುಡೆ ಪ್ರಕರಣದ ಆರೋಪಿ ಸದ್ಯ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನನ್ನು ಎಸ್‌ಐಟಿ ತಂಡ ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ವೇಳೆ ನ್ಯಾಯಾಧೀಶರ ಮುಂದೆ ಚಿನ್ನಯ್ಯ ಮತ್ತಷ್ಟು ಹೇಳಿಕೆ ನೀಡಿದ್ದಾನೆ. ಈ ಹಿಂದೆ ನೀಡಿದ್ದ ಹೇಳಿಕೆಗೆ ಹೆಚ್ಚುವರಿ ಹೇಳಿಕೆ ಸೇರ್ಪಡೆ ಪ್ರಕ್ರಿಯೆ ನಡೆಸಲಾಯಿತು. ಚಿನ್ನಯ್ಯನ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಯಿತು. ಪೂರ್ಣ ಪ್ರಮಾಣದಲ್ಲಿ ಹೇಳಿಕೆ ಪಡೆಯಲು ಸೆ.23ರಂದು ಮತ್ತೆ ಹಾಜರುಪಡಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ. 

ವಿಠಲ ವಿರುದ್ಧ ದೂರು..

ಎಸ್‌ಐಟಿ ತನಿಖೆ ನಡೆಸುತ್ತಿರುವ ವೇಳೆ ಸೌಜನ್ಯ ಮಾವ ವಿಠಲ ಗೌಡನಿಂದ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ಧರ್ಮಸ್ಥಳ ಗ್ರಾಮಸ್ಥ ಸಂದೀಪ್ ರೈ ಎಂಬವರು ಎಸ್‌ಐಟಿಗೆ ದೂರು ನೀಡಿದ್ದಾರೆ.

ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಹೊರಬಂದು ವಿಠಲ ಗೌಡ ವಿಡಿಯೋ ಹರಿಬಿಟ್ಟ ಹಿನ್ನೆಲೆಯಲ್ಲಿ ಈ ದೂರು ನೀಡಲಾಗಿದೆ. ಎಸ್‌ಐಟಿ ವಿಚಾರಣೆ ಮುಗಿಸಿ ಹೊರಗೆ ಬಂದ ಬಳಿಕ ಯೂಟ್ಯೂಬ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಸಾಕ್ಷ್ಯ ನಾಶ ಮಾಡಲು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 


ಅಸಹಜ ಸಾವು ದೂರು..

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಸಿಪಿಎಂ ಮುಖಂಡ ಬಿ.ಎಂ. ಭಟ್ ಎಂಬವರು ಎಸ್‌ಐಟಿ ಠಾಣೆಗೆ ದೂರು ನೀಡಿದ್ದಾರೆ.

ಧರ್ಮಸ್ಥಳ ಠಾಣೆ ವ್ಯಾಪ್ತಿಯ ಅಸಹಜ ಸಾವುಗಳ ತನಿಖೆಯನ್ನು ಎಸ್‌ಐಟಿ ನಡೆಸಬೇಕು. ಎಸ್‌ಐಟಿ ಆದೇಶದಲ್ಲಿ 20 ವರ್ಷಗಳ ಅಸಹಜ ಸಾವುಗಳ ತನಿಖೆಯ ಉಲ್ಲೇಖವಿದೆ. ಹೀಗಾಗಿ ಕಳೆದ 20 ವರ್ಷಗಳಲ್ಲಿ ನಡೆದ ಅಸಹಜ ಸಾವುಗಳ ಬಗ್ಗೆ ತನಿಖೆ ಮಾಡಬೇಕು. ಈ ಬಗ್ಗೆ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ಬಿ.ಎಂ.ಭಟ್ ದೂರು ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article