
ವಾಸಂತಿ ಸಹೋದರ ಎಸ್‌ಐಟಿಗೆ ಹಾಜರು..
ಮಂಗಳೂರು: ಅನನ್ಯಾ ಭಟ್ ಎಂಬಾಕೆ ಬೆಳ್ತಂಗಡಿಗೆ ಬಂದು ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿ ಸುಜಾತಾ ಭಟ್ ನೀಡಿದ ಸುಳ್ಳು ದೂರಿನ ವಿಚಾರವಾಗಿ ವಾಸಂತಿ ಎಂ.ಪಿ. ಅವರ ಸಹೋದರ ಕೊಡಗು ಮೂಲದ ವಿಜಯ್ ಇಂದು ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಹಾಜರಾಗಿದ್ದಾರೆ.
ವಿಚಾರಣೆಗೆಂದು ಎಸ್‌ಐಟಿ ಕಚೇರಿಯಿಂದ ವಿಜಯ್ ಅವರಿಗೆ ನೋಟಿಸ್ ನೀಡಲಾಗಿತ್ತು. ಸುಜಾತಾ ಭಟ್ ಅವರು ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳಕ್ಕೆ ಸ್ನೇಹಿತೆಯರ ಜತೆ ಬಂದು ಕಾಣೆಯಾಗಿದ್ದಳು. ಅವಳ ಬಗ್ಗೆ ಧರ್ಮಸ್ಥಳದಲ್ಲಿ ವಿಚಾರಿಸಿದಾಗ ದೂರು ಪಡೆದಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಅದಾದ ಬಳಿಕ ಅನನ್ಯಾ ಭಟ್ ಎಂದು ಹೇಳಿ ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸುಶ್ರೂಶಕಿಯಾಗಿದ್ದ ವಾಸಂತಿ ಎಂ.ಪಿ. ಅವರ ಫೋಟೋವನ್ನು ಮಾಧ್ಯಮಕ್ಕೆ ತೋರಿಸಿದ್ದರು.
ವಿಚಾರಣೆ ಬಳಿಕ ಈಕೆ ಸುಜಾತಾ ಭಟ್ ನೀಡಿದ ಫೋಟೋ ಸುಳ್ಳು ಮಾಹಿತಿಯಾಗಿದ್ದು, ವಾಸಂತಿ ಎಂ.ಪಿ. ಅವರು ಮೃತಪಟ್ಟು 18 ವರ್ಷವಾಗಿದೆ ಎಂದು ತಿಳಿದು ಬಂದಿದೆ. ವಸಂತಿ ಅವರ ಮಾವ ರಂಗಪ್ರಸಾದ್ ಅವರ ಮನೆಯಲ್ಲಿ ಕೇರ್ ಟೇಕರ್ ಆಗಿ ಸುಜಾತಾ ಭಟ್ ಆಶ್ರಯ ಪಡೆದಿದ್ದರು. ಈ ವೇಳೆ ಅಲ್ಲಿದ್ದ ವಸಂತಿ ಫೋಟೋವನ್ನು ಮಾಧ್ಯಮಕ್ಕೆ ನೀಡಿದ್ದರು.
ಈ ವಿಚಾರವಾಗಿ ಎಸ್.ಐ.ಟಿ. ವಿಚಾರಣೆಗೆ ಬೆಳ್ತಂಗಡಿಗೆ ವಿಜಯ್ ಅವರನ್ನು ಕರೆಸಿ ಹೇಳಿಕೆ ಪಡೆದಿದೆ. ವಿಜಯ್ ಅವರು ವಾಸಂತಿ ಮೃತಪಟ್ಟ ಮರಣ ಪ್ರಮಾಣ ಪತ್ರವನ್ನು ಎಸ್‌ಐಟಿಗೆ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿ ಇತರ ದಾಖಲೆ ಒದಗಿಸಿರುವುದಾಗಿ ವಿಜಯ್ ತಿಳಿಸಿದ್ದಾರೆ.