
ತಲೆ ಬುರುಡೆ ಪತ್ತೆ: ದೂರು ನೀಡಲು ಎಸ್‌ಐಟಿ ಸಿದ್ಧತೆ
ಮಂಗಳೂರು: ಧರ್ಮಸ್ಥಳ ಪ್ರಕರಣದ ಬಂಗ್ಲೆಗುಡ್ಡದಲ್ಲಿ ಮಹಜರು ವೇಳೆ ಏಳು ತಲೆ ಬುರುಡೆ, ಅಸ್ಥಿಪಂಜರದ ಕುರುಹು ಪತ್ತೆಯಾದ ವಿಚಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲು ವಿಶೇಷ ತನಿಖಾ ತಂಡ(ಎಸ್‌ಐಟಿ) ಸಿದ್ಧತೆ ನಡೆಸಿದೆ.
ಒಂದು ಶವದ ಬಳಿ ಗುರುತಿನ ಚೀಟಿ ದೊರೆತ ಹಿನ್ನೆಲೆಯಲ್ಲಿ ಅದನ್ನು ಹೊರತುಪಡಿಸಿ ಉಳಿದ ಶವಗಳ ಗುರುತು ಪತ್ತೆಯಾಗಬೇಕಾಗಿದೆ. ಇದಕ್ಕಾಗಿ ಪತ್ತೆಯಾದ ಅವಶೇಷಗಳನ್ನು ಎಸ್‌ಐಟಿ ತಂಡ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಿದೆ.
ಬಂಗ್ಲೆಗುಡ್ಡ ಕಾಡಿನಲ್ಲಿ ಅಸಹಜ ಸಾವುಗಳ ಕುರಿತು ಎಸ್‌ಐಟಿ ದೂರು ದಾಖಲಿಸಲಿದೆ. ಅಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿತ್ತು. ಈ ಅಸ್ಥಿಪಂಜರಗಳು ಯಾರದ್ದು ಎಂದು ಗುರುತು ಪತ್ತೆಗೆ ಎಸ್‌ಐಟಿ ದೂರು ದಾಖಲಿಸಲಿದೆ.
ಒಂದು ಅಸ್ಥಿಪಂಜರ ಕೊಡಗು ಮೂಲದ ಅಯ್ಯಪ್ಪರದ್ದು ಎಂಬುದು ಬಹುತೇಕ ಖಚಿತಗೊಂಡಿದೆ. ಕೊಡಗಿನ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ ಅವರ ಪುತ್ರ ಜೀವನ್ ಶನಿವಾರ ಬೆಳ್ತಂಗಡಿ ಎಸ್‌ಐಟಿ ಠಾಣೆಗೆ ಆಗಮಿಸಿದ್ದಾರೆ.
ಬಂಗ್ಲೆಗುಡ್ಡ ಮಹಜರಿನಲ್ಲಿ ಪತ್ತೆಯಾದ ತಲೆಬುರುಡೆ ಮತ್ತು ಅಸ್ಥಿಪಂಜರದ ಜಾಗದಲ್ಲಿ ಅಯ್ಯಪ್ಪನ ಗುರುತಿನ ತೀಟಿ ಮತ್ತು ವಾಕಿಂಗ್ ಸ್ಟಿಕ್ ಪತ್ತೆಯಾಗಿತ್ತು. ಜೀವನ್‌ರಿಂದ ತಂದೆಯ ನಾಪತ್ತೆ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕಲಿದೆ.