ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಓಗಳ ಜಂಟಿ ಸಭೆ: 9/11, ಏಕ ನಿವೇಶನ ವಿನ್ಯಾಸ ಕಡತಗಳ ಕುರಿತು ಸಮಾಲೋಚನೆ

ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಓಗಳ ಜಂಟಿ ಸಭೆ: 9/11, ಏಕ ನಿವೇಶನ ವಿನ್ಯಾಸ ಕಡತಗಳ ಕುರಿತು ಸಮಾಲೋಚನೆ


ಸುಳ್ಯ: ಸುಳ್ಯ ಯೋಜನಾ ಪ್ರಾಧಿಕಾರ ಮತ್ತು ಸುಳ್ಯ ತಾಲೂಕು ಪಂಚಾಯತ್ ವತಿಯಿಂದ ಸುಳ್ಯ ತಾಲೂಕು ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜಂಟಿ ಸಭೆ ನಡೆಯಿತು.

ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ವಿಷಯ ಪ್ರಸ್ತಾವನೆ ಮಾಡಿ ಸುಳ್ಯ ತಾಲೂಕಿನಲ್ಲಿ 9/11 ವಿನ್ಯಾಸ ಅನುಮೋದನೆ, ಕಟ್ಟಡ ಪರವಾನಿಗೆ, ಕನ್ವರ್ಷನ್ ಮೊದಲಾದ ಕಡತ ವಿಲೇವಾರಿಗೆ ಪ್ರಥಮ ಹಂತದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳ ಮತ್ತು ಪಿಡಿಓಗಳ ಈ ಸಭೆ ಕರೆಯಲಾಗಿದೆ. ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಸಾರ್ವಜನಿಕರ ಕೆಲಸಗಳು ತ್ವರಿತವಾಗಿ ನಡೆಯುತ್ತದೆ. 9/11 ಸಮಸ್ಯೆ ಗಳ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಇಂತಹ ಸಭೆಗಳು ಅವಶ್ಯಕ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ ವಹಿಸಿ ಮಾತನಾಡಿ, ಸುಳ್ಯ ತಾಲೂಕಿನಲ್ಲಿ ಈ ವರೆಗೆ 415 ಕಡತಗಳು ಸ್ವೀಕೃತಗೊಂಡಿದ್ದು 232 ಕಡತಗಳಿಗೆ ಅನುಮೋದನೆ ನೀಡಲಾಗಿದೆ, ಗ್ರಾಮ ಪಂಚಾಯತ್‌ನಿಂದ ಸಮರ್ಪಕ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಪ್ರಾಧಿಕಾರದಲ್ಲಿ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ 9/11 ಕಡತಗಳ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸುವಾಗ ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಟೌನ್ ಪ್ಲಾನರ್ ಫೈರೋಜ್ ಮಾಹಿತಿ ನೀಡಿದರು. ಸಂಪರ್ಕ ರಸ್ತೆ, ವಿನ್ಯಾಸ ನಕ್ಷೆ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಪ್ರಾಧಿಕಾರದ ಸದಸ್ಯ-ಕಾರ್ಯದರ್ಶಿ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕಿ ಸ್ವಾತಿ ಎನ್. ಸ್ವಾಮಿ ಸಭೆಗೆ ಮಾಹಿತಿ ನೀಡಿದರು. 

ಗ್ರಾಮ ಪಂಚಾಯತ್ ಸದಸ್ಯರುಗಳ ಒಕ್ಕೂಟದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article