ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ: ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ: ಕಾಂಗ್ರೆಸ್ ವತಿಯಿಂದ ಪ್ರತಿಭಟನೆ


ಮಂಗಳೂರು: ನಗರದ ಕುಳೂರು ಬಳಿ ಇತ್ತೀಚೆಗೆ ಮಹಿಳೆಯೊಬ್ಬರು ವಾಹನ ಸಮೇತ ರಾಷ್ಟ್ರೀಯ ಹೆದ್ದಾರಿ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆದ್ದಾರಿಯ ಅವ್ಯವಸ್ಥೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಪ್ರತಿಭಟನೆ, ಮೆರವಣಿಗೆ ಹಾಗೂ ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ ಯತ್ನ ನಡೆಯಿತು.

ನಗರದ ನಂತೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಯ ಮೂಲಕ ನಂತೂರು ಸಮೀಪದ ಎನ್‌ಎಚ್‌ಎಐ ಕಚೇರಿಗೆ ತೆರಳಿದರು. ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವಕಾಶ ನೀಡಲಿಲ್ಲ. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು.

ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಕೇಂದ್ರ ಸರಕಾರದ ಜವಾಬ್ದಾರಿ. ಹೆದ್ದಾರಿ ಅಸಮರ್ಪಕ ನಿರ್ವಣೆಯಿಂದ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಇತ್ತೀಚೆಗೆ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸೇರಿದಂತೆ ರಾ.ಹೆದ್ದಾರಿಯ ಅವ್ಯವಸ್ಥೆಯಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಕೇಂದ್ರ ಸರಕಾರ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸದಿದ್ದರೆ ಹಣ ಇಲ್ಲದೆ ದುರಸ್ತಿ ಕಾರ್ಯ ಆಗಿಲ್ಲ ಎಂಬ ಹೇಳಿಕೆಯನ್ನು ಎನ್‌ಎಚ್‌ಎಐ ಅಽಕಾರಿಗಳು ನೀಡಿದ್ದು, ಇದು ಸಮಂಜಸವಲ್ಲ. ಶೀಘ್ರವಾಗಿ ಗುಂಡಿಗಳನ್ನು ಮುಚ್ಚಿ ಜನರನ್ನು ಪ್ರಾಣ ಹಾನಿಯಿಂದ ರಕ್ಷಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಗುಂಡಿಗೆ ಮಹಿಳೆ ಪ್ರಾಣ ಕಳೆದುಕೊಂಡ ಪ್ರಕರಣಕ್ಕೆ ಎನ್‌ಎಚ್‌ಎಐ, ಸಂಸದ ಬ್ರಿಜೇಶ್ ಚೌಟ ಅವರು ನೇರ ಹೊಣೆ. ಅಽಕಾರಿಗಳು ಹಾಗೂ ಬಿಜೆಪಿ ಜನಪ್ರತಿನಿಧಿಗಳ ಬೇಜವಾಬ್ಧಾರಿಯಿಂದ ಸಾವು ಸಂಭವಿಸಿದೆ. ಮೃತ ಮಹಿಳೆಯ ಕುಟುಂಬಕ್ಕೆ ಕೇಂದ್ರ ಸರಕಾರ 1 ಕೋಟಿ ರೂ. ಪರಿಹಾರವನ್ನು ತಕ್ಷಣ ನೀಡಬೇಕು. ಹೆದ್ದಾರಿಯ ಎಲ್ಲಾ ಗುಂಡಿಗಳು ಮುಚ್ಚುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಕಾಂಗ್ರೆಸ್ ಮುಖಂಡ ಪದ್ಮರಾಜ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಗುಂಡಿಗಳಿಂದ ಕಳೆದ ಹಲವು ತಿಂಗಳಿನಿಂದ ಅದೆಷ್ಟೋ ಮಂದಿ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಎಚ್ಚರಿಸುತ್ತಾ ಬಂದಿದ್ದರೂ ಹೆದ್ದಾರಿ ಪ್ರಾಧಿಕಾರದ ಅಽಕಾರಿಗಳಾಗಲಿ, ಸಂಸದರಾಗಲಿ ಅಥವಾ ಸ್ಥಳೀಯ ಶಾಸಕರು ಮೌನವಾಗಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡರಾದ ಜೆ.ಆರ್. ಲೋಬೊ, ಮಮತಾ ಗಟ್ಟಿ, ಅಪ್ಪಿ, ಶಾಲೆಟ್ ಪಿಂಟೊ, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಎಂ.ಎಸ್. ಮುಹಮ್ಮದ್, ಅನಿಲ್ ಕುಮಾರ್, ಪ್ರವೀಣ್ ಚಂದ್ರ ಆಳ್ವ, ವಿನಯರಾಜ್, ಹರಿನಾಥ್, ಭಾಸ್ಕರ ಕೆ., ಕಿರಣ್ ಬುಡ್ಲೆಗುತ್ತು, ಡೆನ್ನಿಸ್ ಡಿಸಿಲ್ವ ಭಾಗವಹಿಸಿದ್ದರು.


ಪ್ರತಿಭಟನೆಯ ವೇಳೆ ಅಣಕು ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ಸಿಗರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಿಥುನ್ ರೈ ನೇತೃತ್ವದಲ್ಲಿ ಪ್ರತಿಭಟನಾ ನಿರತ ಕಾಂಗ್ರೆಸ್ಸಿಗರು ಅಣಕು ಮೃತದೇಹವನ್ನು ಎನ್‌ಎಚ್‌ಎಐ ಕಚೇರಿ ಆವರಣಕ್ಕೆ ಎಸೆಯುವ ಮೂಲಕ ಆಕ್ರೋಶ ಪ್ರದರ್ಶಿಸಿದರು. ಕೇಂದ್ರ ಸರಕಾರ, ಬಿಜೆಪಿ, ಸಂಸದ ಬ್ರಿಜೇಶ್ ಚೌಟ, ಶಾಸಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article