ಕುಕ್ಕೆ: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ನೋಟೀಸ್
ಸುಬ್ರಹ್ಮಣ್ಯ: ಇಲಾಖೆಯ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಅವರಿಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತರು ಮತ್ತು ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ ಕಾರ‍್ಯದರ್ಶಿ ಆಗಿರುವ ಡಾ. ಎಂ.ವಿ. ವೆಂಕಟೇಶ್ ಅವರು ಕಾರಣ ಕೇಳಿ ನೋಟೀಸ್ ನೀಡಿದ್ದಾರೆ.
ರಾಜ್ಯ ಸರಕಾರ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಿರುದ್ಧ ಉತ್ತರಾಧಿಮಠದವರು ಉಚ್ಛ ನ್ಯಾಯಾಲಯದಲ್ಲಿ ದಾವೆ (ಪ್ರಕರಣ ಸಂಖ್ಯೆ ಡಬ್ಲ್ಯೂಪಿ ನಂ.11063/2020) ದಾಖಲಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು, ಸಾರಿಗೆ ಮತ್ತು ಹಿಂದೂ ಧಾರ್ಮಿಕ ದತ್ತಿ ಸಚಿವರ ಹೆಸರಿಗೆ ಆ.1 ರಂದು ಪತ್ರವನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೂ ತಾರದೆ ಪತ್ರ ವ್ಯವಹಾರ ನಡೆಸಿದ್ದು ಈ ಬಗ್ಗೆ ಕಾರ್ಯನಿರ್ವಹಕ ಅಧಿಕಾರಿಗಳು ವರದಿ ಮಾಡಿದ್ದರು.
ಇಲಾಖೆಯ ನಿಯಮದ ಅನ್ವಯ ಅಧಿಸೂಚಿತ ಸಂಸ್ಥೆಯಲ್ಲಿ ಕಾರ್ಯನಿರ್ವಹಕ ಅಧಿಕಾರಿಗಳನ್ನು ನೇಮಕ ಮಾಡದಿರುವ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನಿಗೆ ಜವಬ್ದಾರಿ ವಹಿಸಿರುವಂತೆ ಅಧಿಕಾರಗಳನ್ನು ಚಲಾಯಿಸಬೇಕಾಗಿರುತ್ತದೆ. ಆದರೆ ಹರೀಶ್ ಇಂಜಾಡಿ ಅವರು ನಿಯಮದ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಕ ಅಧಿಕಾರಿಗಳು ನೇಮಕವಾಗಿರುವ ಅಧಿಸೂಚಿತ ಸಂಸ್ಥೆಯ ವಿರುದ್ಧವಾಗಿ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ಮತ್ತು ಪ್ರಕರಣದ ಪೂರ್ವಪದಗಳನ್ನು ಇಲಾಖೆಯ ಕಾಯ್ದೆ ಮತ್ತು ನಿಯಮಗಳ ಪರಿಧಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳದೆ, ನೇರವಾಗಿ ಸಚಿವರೊಂದಿಗೆ ಪತ್ರ ವ್ಯವಹರಿಸಿರುವುದು ಆಕ್ಷೇಪಾರ್ಗವಾಗಿರುತ್ತದೆ.
ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ಪ್ರಮುಖ ದೇವಸ್ಥಾನದ ಅಧ್ಯಕ್ಷ ಗಾದಿಯಲ್ಲಿರುವ ನೀವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ನಿಯಮಗಳು 2002ರ ನಿಯಮ 33ರಲ್ಲಿ ಕಲ್ಪಿಸಿರುವ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿರುವುದರಿಂದ ತಮ್ಮ ವಿರುದ್ಧ ಏಕೆ ನಿಯಮಾನುಸಾರಗಳ ಕ್ರಮಕೈಗೊಳ್ಳಬಾರದು ಎಂಬ ಬಗ್ಗೆ ನೋಟೀಸ್ ತಲುಪಿದ 7 ದಿನಗಳೊಳಗೆ ಈ ಕಚೇರಿಗೆ ತಮ್ಮ ಲಿಖಿತ ಸಮಜಾಯಿಸಿ/ಹೇಳಿಕೆ ಸಲ್ಲಿಸಲು ಆಯುಕ್ತರು ತಿಳಿಸಿದ್ದಾರೆ.
ತಪ್ಪಿದ್ದಲ್ಲಿ ನಿಮ್ಮ ಸಮಜಾಯಿಸಿ/ಹೇಳಿಕೆ ಏನೂ ಇಲ್ಲವೆಂದು ಭಾವಿಸಿ ನಿಮ್ಮನ್ನು ವ್ಯವಸ್ಥಾಪನಾ ಸಮಿತಿಯ ಸದಸ್ಯತ್ವದಿಂದ ತೆಗೆದು ಹಾಕಲು ಕಾನೂನು ರೀತ್ಯ ಮುಂದಿನ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಯುಕ್ತರು ನೀಡಿದ ನೋಟೀಸ್‌ನಲ್ಲಿ ತಿಳಿಸಿದ್ದಾರೆ.