ನಕಲಿ ದಾಖಲೆ ಸೃಶ್ಟಿಸಿ ವಂಚನೆ ಪ್ರಕರಣ: ಹಲವರ ಬಂಧನ
ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ತಯಾರಿಸಿ ಅವುಗಳನ್ನು ನೈಜ ದಾಖಲಾತಿಗಳೆಂದು ನಂಬಿಸಿ ವಿವಿಧ ಇಲಾಖೆಗಳಿಗೆ ಮತ್ತು ನ್ಯಾಯಾಲಯಕ್ಕೆ ನೀಡಿ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಜಾಮೀನು ನೀಡಲು ಸಹಕಬಳಕೆ ಮಾಡುತ್ತಿದ್ದ ಮಾಹಿತಿಯನ್ವಯ ಬಪ್ಪನಾಡುವಿನ ಅಬ್ದುಲ್ ರೆಹಮಾನ್(46) ಎಂಬಾತನನ್ನು ಬಂಧಿಸಿದ ಬಳಿಕ ಈಗ ಮತ್ತೆ ಹಲವು ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತೊಕ್ಕೊಟ್ಟು ಅಂಬಿಕಾ ರಸ್ತೆ ನಿವಾಸಿ ನಿಶಾಂತ್ ಕುಮಾರ್(28), ಬಂಟ್ವಾಳ ತಾಲೂಕು ಪುದು ಸುಜೀರ್ ರಸ್ತೆ ನಿವಾಸಿ ನಿತಿನ್ ಕುಮಾರ್ (31), ಇಂದಿರಾನಗರ ಹಾಲಾಡಿ ಸಜಿಪ ಮುನ್ನೂರು ನಿವಾಸಿ ಹಸನ್ ರಿಯಾಜ್ ಯಾನೆ ರಿಯಾಜ್ (46) ಕಾವೂರು ಪಳನೀರ್ ನಿವಾಸಿ ಮಹಮ್ಮದ್ ಹನೀಫ್ (39) ಈ ಜಾಲದಲ್ಲಿ ಭಾಗಿಯಾಗಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವಂಚನೆ ಜಾಲದಲ್ಲಿ ಇನ್ನೂ ಹಲವಾರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ತನಿಖೆ ಮುಂದುವರೆದಿದೆ. ಜಾಮೀನಿಗಾಗಿ ಆರ್‌ಟಿಸಿ ದುರ್ಬಳಕೆಯೂ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಈ ಮೊದಲು ಬಂಧಿತ ಅಬ್ದುಲ್ ರೆಹಮಾನ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈತನು ತನಗೆ ನಕಲಿ ದಾಖಲಾತಿಗಳನ್ನು ತಯಾರಿಸಲು ಸಹಕರಿಸುತ್ತಿದ್ದ ಕೊಡಿಯಾಲ್‌ಬೈಲ್‌ನ ಕಂಪ್ಯೂಟರ್ ಸೆಂಟರೊಂದರಲ್ಲಿ ಕೆಲಸಕ್ಕಿದ್ದ ಮತ್ತೊಬ್ಬ ಆರೋಪಿ ನಿಶಾಂತ್ ಕುಮಾರ್ ಎಂಬಾತನ ಬಗ್ಗೆ ಮಾಹಿತಿ ನೀಡಿದ್ದು, ಆತನನ್ನು ಸಹ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಜಾಮೀನಿಗಾಗಿ ನಕಲಿ ದಾಖಲೆ:
ತನಿಖೆಯ ವೇಳೆ ನ್ಯಾಯಾಲಯಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಸಮಯ ನಕಲಿ ಆಧಾರ್ ಕಾರ್ಡ್‌ಗಳಲ್ಲಿ ತಮ್ಮ ಫೋಟೋಗಳನ್ನು ಹಾಕಿಸಿಕೊಂಡು ಅಸಲಿ ವ್ಯಕ್ತಿಗಳಂತೆ ನ್ಯಾಯಾಲಯದ ಮುಂದೆ ಹಾಜರಾಗಿ ಆರೋಪಿಗಳಿಗೆ ಜಾಮೀನು ನೀಡಿ ನ್ಯಾಯಾಲಯಕ್ಕೆ ವಂಚಿಸಿ ಎರಡು ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಜಾಮೀನು ಕೊಡಿಸಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳನ್ನು ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾದ 2 ಪ್ರಕರಣಗಳ ತನಿಖೆಯನ್ನು ಕೈಗೊಂಡಾಗ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಮೊ.ಸಂ. 24/22 ರಲ್ಲಿನ ಆರೋಪಿಗೆ ನಿತಿನ್ ಕುಮಾರ್ ಎಂಬಾತನು ಗಣೇಶ್ ಕೆ.ಸಾಲ್ಯಾನ್ ಎಂಬ ನಕಲಿ ಹೆಸರಿನಲ್ಲಿ ಜಾಮೀನು ಕೊಡಿಸಿ ಮಾನ್ಯ ನ್ಯಾಯಾಲಯಕ್ಕೆ ವಂಚಿಸಿರುವುದು ಕಂಡು ಬಂದಿದೆ ಎಂದವರು ತಿಳಿಸಿದ್ದಾರೆ.
ಅದೇ ರೀತಿ ದಕ್ಷಿಣ ಪೊಲೀಸ್ ಠಾಣಾ ಮೊ.ಸಂ. 46/22 ರಲ್ಲಿನ ಆರೋಪಿಗೆ ಹಸನ್ ರಿಯಾಜ್ ಎಂಬಾತನು ಎ.ಎಂ. ಹಮೀದ್ ಎಂಬ ನಕಲಿ ಹೆಸರಿನಲ್ಲಿ ಜಾಮೀನು ಕೊಡಿಸಿ ನ್ಯಾಯಾಲಯಕ್ಕೆ ವಂಚಿಸಿರುವುದು ಕಂಡು ಬಂದಿದ್ದು, ಆತನನ್ನು ಕೂಡ ಬಂಧಿಸಲಾಗಿದೆ. ಬಂದಿತರ ಪೈಕಿ ಹನೀಫ್ ನ್ಯಾಯಾಲಯಕ್ಕೆ ನಕಲಿ ದಾಖಲಾತಿಗಳನ್ನು ನೀಡಿ ಆರೋಪಿಗಳಿಗೆ ಜಾಮೀನು ಕೊಡಿಸಲು ಸಹಕರಿಸುತ್ತಿದ್ದ ಎಂದು ಕಮಿಷನರ್ ತಿಳಿಸಿದ್ದಾರೆ.
ಉಡುಪಿಯಲ್ಲೂ ವಂಚನೆ
ಉಡುಪಿ ಜಿಲ್ಲೆಯಲ್ಲೂ ಇಂತಹ ಸುಮಾರು 10 ಪ್ರಕರಣಗಳು ನಡೆದಿರುವುದು ದೃಢಪಟ್ಟಿದೆ. ಯಾರದ್ದೋ ಆರ್‌ಟಿಸಿಯನ್ನು ದುರ್ಬಳಕೆ ಮಾಡಿರುವುದು ಕಂಡುಬಂದಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಆರ್‌ಟಿಸಿಗಳನ್ನು ಚೆಕ್ ಮಾಡುವುದು ಒಳಿತು ಎಂದವರು ಸಲಹೆ ನೀಡಿದ್ದಾರೆ.