ಧ್ವನಿವರ್ಧಕ ಬಳಕೆ ಮಿತಿಯಲ್ಲಿರಲಿ: ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮುಂದಿನ ದಸರಾ ಆಚರಣೆಗೆ ಇಲಾಖೆಯಿಂದ ಸಮಯ, ಧ್ವನಿವರ್ಧಕ ಬಳಕೆ ಕುರಿತಂತೆ ನಿಯಮ ಯಾವ ರೀತಿ ಇರಲಿದೆ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಕಷ್ಟು ಗಣೇಶೋತ್ಸವ ಮೆರವಣಿಗೆಗಳು ತಡರಾತ್ರಿವರೆಗೆ ನಡೆದಿದೆ. ಎಲ್ಲಿಯೂ ಪೊಲೀಸರು ಸಮಸ್ಯೆ ಕೊಟ್ಟಿಲ್ಲ. ಆದರೆ ಸೌಂಡ್‌ಗೆ ಮಾತ್ರ ಮಿತಿಯನ್ನು ಹಾಕಲಾಗಿತ್ತು. ಮಂಗಳೂರು ಗಣೇಶೋತ್ಸವವ ಕಾರ್ಯಕ್ರಮದ ಮೆರವಣಿಗೆ ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದು, ಟ್ಯಾಬ್ಲೋಗಳಲ್ಲಿ ಕೂಡಾ ನಾವು ಸೂಚಿಸಿದಷ್ಟೇ ಸೌಂಡ್ ಬಳಕೆ ಮಾಡಿದ್ದಾರೆ. ಮುಂಜಾನೆ 2.30ರ ವರೆಗೆ ಮೆರವಣಿಗೆ ನಡೆದಿದ್ದು,ಯಾರಿಗೂ ಸಮಸ್ಯೆಯೂ ಆಗಿಲ್ಲ ಎಂದರು.
ನಾಟಕ, ಯಕ್ಷಗಾನಗಳಿಗೂ ಇದೇ ಮಾರ್ಗಸೂಚಿಯಿದ್ದು, ಎಲ್ಲಿ ಎಷ್ಟು ಬೇಕಾದರೂ ಸೌಂಡ್ ಇಡುವ ಅವಕಾಶ ಇಲ್ಲ. ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮಗಳ ವ್ಯಾಪ್ತಿ ಎಷ್ಟು? ಎಷ್ಟು ಜನ ಸೇರುತ್ತಾರೆ ಎನ್ನುವುದನ್ನು ಆಧರಿಸಿ ಅದನ್ನು ಅನುಗುಣವಾಗಿ ಮೈಕ್ ಬಳಕೆ ಮಾಡಬೇಕು. ಈ ಬಗ್ಗೆ ಸ್ಥಳೀಯ ಠಾಣೆಗಳಲ್ಲಿ ಅನುಮತಿ ಪಡೆಯುವಾಗಲೇ ಠಾಣಾ ನಿರೀಕ್ಷಕರು ಈ ಬಗ್ಗೆ ಪರಿಶೀಲಿಸಿ ಎಷ್ಟು ಡೆಸಿಬಲ್ ಬಳಕೆ ಮಾಡಬಹುದು. 100 ಜನ ಸೇರುವಲ್ಲಿ 2000 ಜನರಿಗೆ ಕೇಳಿಸುವಷ್ಟು ಧ್ವನಿವರ್ಧಕ ಅಳವಡಿಸಿ ಇತರರಿಗೆ ತೊಂದರೆ ಮಾಡಲು ಯಾವುದೇ ರೀತಿಯಲ್ಲಿ ಅವಕಾಶ ನೀಡುವುದಿಲ್ಲ. ಪೊಲೀಸ್ ಇಲಾಖೆಯು ಈಗಾಗಲೇ ಸೌಂಡ್ ಪತ್ತೆಹಚ್ಚುವ ‘ಮೈಕ್ ಮೀಟರ್’ಗಳನ್ನು ಕೂಡಾ ಇರಿಸಿಕೊಂಡಿದ್ದು, ಎಸಿಪಿಗಳಿಗೆ ಒದಗಿಸಲಾಗಿದೆ. ಅನುಮತಿ ಪಡೆದ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಧ್ವನಿವರ್ಧಕ ಬಳಸಿ ಉಲ್ಲಂಘನೆ ಮಾಡಿದಾಗ ಮಾತ್ರವೇ ಕ್ರಮಕೈಗೊಳ್ಳಬೇಕಾಗುತ್ತದೆ ಎಂದವರು ಹೇಳಿದರು.
ಯಕ್ಷಗಾನಕ್ಕೆ ಸಂಬಂಸಿದ ಕಾರ್ಯಕ್ರಮವೊಂದರಲ್ಲಿ ಪೊಲೀಸರು ಧ್ವನಿವರ್ಧಕ ತೆಗೆಯುವ ವೀಡಿಯೋ ವೈರಲ್ ಆದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ವೀಡಿಯೋ ನಮ್ಮ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲ ಎಂದು ಹೇಳಿದರು.
1.7 ಕೋಟಿ ದಂಡ ವಸೂಲಿ..
ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಶೇ.50 ರಿಯಾಯಿತಿ ದರದಲ್ಲಿ ಪಾವತಿಸುವ ಅವಕಾಶ ನೀಡಲಾಗಿರುವ ಹಿನ್ನೆಲೆಯಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಆ.23ರಿಂದ ಸೆ.12ರ ವರೆಗೆ 42,600 ಮಂದಿ 1.7 ಕೋಟಿ ದಂಡ ಪಾವತಿ ಪಾವತಿ ಮಾಡಿದ್ದಾರೆ. ಸೆ.೧೩ರಂದು ನ್ಯಾಯಾಲಯದಲ್ಲಿ ಲೋಕ ಅದಾಲತ್‌ನಲ್ಲಿ ಪಾವತಿಸಲು ಅವಕಾಶವಿದ್ದು, ಇದರಿಂದ ದಂಡದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದಿದ್ದಾರೆ.