ಹೆದ್ದಾರಿ ಗುಂಡಿಗೆ ಬಿದ್ದು ದ್ವಿಚಕ್ರ ಸವಾರೆ ಸಾವು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಲು ಹೋರಾಟ ಸಮಿತಿ ಆಗ್ರಹ
ಮಂಗಳೂರು: ಸುರತ್ಕಲ್-ನಂತೂರು ಹೆದ್ದಾರಿಯ ಕೂಳೂರು ಸಮೀಪ ಹೆದ್ದಾರಿ ಗುಂಡಿಗೆ ಸಿಲುಕಿ ಉರುಳಿ ಬಿದ್ದ ದ್ವಿಚಕ್ರ ಸವಾರೆ ಮಾಧವಿ ಹಿಂಬದಿಯ ಟ್ರಕ್‌ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಾಗರಿಕರಿಗೆ ಆಘಾತ ಉಂಟು ಮಾಡಿದೆ.
ಹೊಂಡ, ಗುಂಡಿಗಳಿಂದ ತುಂಬಿರುವ ಈ ಹೆದ್ದಾರಿಯಲ್ಲಿ ನಡೆಯುತ್ತಿರುವ ಸಾವುಗಳ ಸರಣಿಗೆ ಇದು ಹೊಸ ಸೇರ್ಪಡೆಯಾಗಿದೆ. ಸಕಾಲದಲ್ಲಿ ಗುಂಡಿಗಳನ್ನು ಮುಚ್ಚಲು, ಹೆದ್ದಾರಿ ನಿರ್ವಹಣೆ ಮಾಡಲು ವಿಫಲರಾದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಇಂಜಿನಿಯರ್‌ಗಳು ದ್ವಿಚಕ್ರ ಸವಾರರ ಸರಣಿ ಸಾವುಗಳಿಗೆ ನೇರ ಹೊಣೆಯಾಗಿದ್ದು, ಇಂದು ಹೆದ್ದಾರಿ ಗುಂಡಿಗೆ ಉರುಳಿ ಮೃತಪಟ್ಟ ದ್ವಿಚಕ್ರ ಸವಾರೆ ಮಾಧವಿಯ ಸಾವಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನೆ ಆರೋಪಿಗಳನ್ನಾಗಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, ಮೃತ ಪಟ್ಟ ಸವಾರೆಯ ಸಂತ್ರಸ್ತ ಕುಟುಂಬಕ್ಕೆ ಹೆದ್ದಾರಿ ಪ್ರಾಧಿಕಾರ ಗರಿಷ್ಟ ಪರಿಹಾರ ನೀಡಬೇಕು ಎಂದು ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್’ ಪ್ರಕಟಣೆಯಲ್ಲಿ ಆಗ್ರಹಿಸಿದೆ.
ಸುರತ್ಕಲ್-ನಂತೂರು ರಾಷ್ಟ್ರೀಯ ಹೆದ್ದಾರಿ ನಾಲ್ಕು ಪಥದ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿದ ಮೇಲೆ ಒಮ್ಮೆಯೂ ಪೂರ್ಣ ಪ್ರಮಾಣದ ದುರಸ್ತಿ, ಡಾಮರೀಕರಣ ಕಂಡಿಲ್ಲ. ಸರಿಯಾದ ನಿರ್ವಹಣಾ ವ್ಯವಸ್ಥೆಯನ್ನೂ ಹೊಂದಿಲ್ಲ. ಈ ಹೆದ್ದಾರಿಯ ವಿನ್ಯಾಸ, ಕಾಮಗಾರಿಯೇ ಕಳಪೆ ಹಾಗೂ ದೋಷಪೂರಿತವಾಗಿತ್ತು. ಕಳೆದ ಒಂದು ದಶಕದಿಂದಲೂ ಹೊಂಡ, ಗುಂಡಿಗಳು ಈ ಹೆದ್ದಾರಿಯಲ್ಲಿ ಸಾಮಾನ್ಯ ಎಂಬಂತಾಗಿದೆ. ಟೋಲ್ ವಿರೋಧಿ ಹೋರಾಟ ಸಮಿತಿ ಪ್ರತಿ ಸಂದರ್ಭದಲ್ಲಿಯು ಗುಂಡಿ ಮುಚ್ಚಲು, ದುರಸ್ತಿಗೆ ಆಗ್ರಹಿಸಿ ವಿವಿಧ ರೀತಿಯಲ್ಲಿ ಧ್ವನಿ ಎತ್ತುತ್ತಾ ಬಂದಿದೆ. ಧರಣಿ, ಪ್ರತಿಭಟನೆ, ಪಾದಯಾತ್ರೆಗಳನ್ನು ಸಂಘಟಿಸಿದೆ.
ಇದೇ ವರ್ಷದ ಫೆಬ್ರವರಿಯಲ್ಲಿ, ಮಳೆಗಾಲ ಆರಂಭದ ಮುನ್ನ ಪೂರ್ಣಪ್ರಮಾಣದಲ್ಲಿ ಹೆದ್ದಾರಿ ದುರಸ್ತಿ ನಡೆಸುವಂತೆ ಆಗ್ರಹಿಸಿ ನಂತೂರು ಜಂಕ್ಷನ್‌ನಲ್ಲಿ ಸಾಮೂಹಿಕ ಧರಣಿಯನ್ನೂ ನಡೆಸಲಾಗಿತ್ತು. ಮಳೆಗಾಲದ ಆರಂಭದಲ್ಲಿ ಬೈಕಂಪಾಡಿ ಬಳಿ ದ್ವಿಚಕ್ರ ಸವಾರ ಅಶ್ರಫ್ ಹೆದ್ದಾರಿ ಗುಂಡಿಗೆ ಸಿಲುಕಿ ಮೃತಪಟ್ಟಾಗ ಸುರತ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ಎಚ್ಚರಿಸಲಾಗಿತ್ತು.
ಆದರೆ, ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ, ಕರ್ತವ್ಯ ಲೋಪ, ಸ್ಥಳೀಯ ಜನಪ್ರತಿನಿಧಿಗಳ ಬೇಜವಾಬ್ದಾರಿತನದ ನಡೆಗಳಿಂದ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ನಂತೂರು-ಸುರತ್ಕಲ್ ಹೆದ್ದಾರಿಯಲ್ಲಿ ಸಂಚರಿಸಲು ವಾಹನ ಸವಾರರು ಭಯಪಡುವಂತಾಗಿದೆ. ಹೆದ್ದಾರಿ ಸಂಚಾರ ಎಂಬುದು ಸಾವಿನೆಡೆಗೆ ಸಂಚಾರ ಎಂಬಂತಾಗಿದೆ. ಈಗಾಗಲೆ ಹತ್ತಾರು ವಾಹನ ಸವಾರರು ಹೆದ್ದಾರಿ ಗುಂಡಿಯಿಂದಾಗಿ ಪ್ರಾಣ ತೆತ್ತಿದ್ದಾರೆ. ಈ ಸಾವುಗಳಿಗೆ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ, ಕರ್ತವ್ಯ ಲೋಪಗಳೇ ನೇರ ಕಾರಣವಾಗಿದ್ದು, ಇಂದು ಕೂಳೂರಿನಲ್ಲಿ ನಡೆದ ಅಪಘಾತ, ಮಾಧವಿಯ ದಾರುಣ ಸಾವಿಗೆ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಸಂಬಂಧ ಪಟ್ಟ ಅಧಿಕಾರಿಗಳನ್ನು ಹೊಣೆಯಾಗಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, ಮೃತ ಮಾಧವಿಯ ಸಂತ್ರಸ್ತ ಕುಟುಂಬಕ್ಕೆ ಹೆದ್ದಾರಿ ಪ್ರಾಧಿಕಾರ ಗರಿಷ್ಟ ಪರಿಹಾರ ನೀಡಬೇಕು, ಈ ಕುರಿತು ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕು ಎಂದು ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್’ ಪ್ರಕಟಣೆಯಲ್ಲಿ ಒತ್ತಾಯಿಸಿದೆ.