
ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
Friday, September 19, 2025
ಮಂಗಳೂರು: ಕೊಲೆ, ಸುಲಿಗೆ, ದಾಳಿ, ಎನ್.ಡಿ.ಪಿಎಸ್ ಸೇರಿದಂತೆ ಒಟ್ಟು 8 ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹಾಗೂ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಬಂಟ್ವಾಳ ತಾಲೂಕು ನರಿಗಾನ ಗ್ರಾಮದ ಪೊಟ್ಟೊಳಿಕೆ ನಿವಾಸಿ, ರೌಡಿ ಶೀಟರ್ ನಜೀಮ್ ಯಾನೆ ನಜ್ಜು (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈತನ ಮೇಲೆ ಕೊಣಾಜೆ, ಉಳ್ಳಾಲ, ಮಂಗಳೂರು ನಾರ್ತ್, ಬೆಂಗಳೂರು ನಗರದ ಬೇಗೂರು, ಭಟ್ಕಳ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಆರೋಪಿ ಜಾಮೀನು ಪಡೆದ ಬಳಿಕ ಒಂದೂವರೆ ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದನು.
ನಜೀಮ್ ವಿರುದ್ಧ ಹೊರಡಿಸಲಾಗಿದ್ದ ವಾರೆಂಟ್ ಹಾಗೂ ಪ್ರೋಕ್ಲಮೇಷನ್ ಬಾಕಿ ಇದ್ದ ಹಿನ್ನೆಲೆಯಲ್ಲಿ, ವಿಶೇಷ ಕ್ರಮ ಕೈಗೊಂಡು ಆತನನ್ನು ಬೆಂಗಳೂರು ನಗರದಿಂದ ಪತ್ತೆಹಚ್ಚಿ ಬಂಧಿಸಲಾಗಿದೆ.
ಆರೋಪಿಯನ್ನು ಮಂಗಳೂರು ದಕ್ಷಿಣ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯಾದ ದಿನೇಶ್, ಶರೀಫ್ ಮತ್ತು ರಮೇಶ್ ಅವರ ತಂಡ ಬೆಂಗಳೂರು ನಗರದಿಂದ ಬಂಧಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.