ಅಂಡಾಶಯ ನ್ಯೂನ್ಯತೆಯ ನಡುವೆಯೂ ಸ್ವಂತ ಅಂಡಾಣುವಿನಿಂದ ಗರ್ಭ ಧರಿಸಿದ ಮಹಿಳೆ
ಮಂಗಳೂರು: ಅಂಡಾಶಯದ ಅಕಾಲಿಕ ನ್ಯೂನ್ಯತೆಯಿಂದ ಬಳಲುತ್ತಿದ್ದ 26 ವರ್ಷದ ಮಹಿಳೆಯೊಬ್ಬರು ಗರ್ಭಿಣಿಯಾಗಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪರೂಪದ ವೈದ್ಯಕೀಯ ಪ್ರಕರಣ ಬೆಳಕಿಗೆ ಬಂದಿದೆ.
40 ವರ್ಷಕ್ಕಿಂತ ಮುಂಚೆಯೇ ಅಂಡಾಶಯಗಳ ಕಾರ್ಯಚಟುವಟಿಕೆ ಕ್ಷೀಣಿಸುವ ಆರೋಗ್ಯ ಸ್ಥಿತಿಯನ್ನು ಅಕಾಲಿಕ ಅಂಡಾಶಯ ನ್ಯೂನ್ಯತೆ ಎನ್ನಲಾಗುತ್ತದೆ. ಈ ಸ್ಥಿತಿಯಲ್ಲಿ ನಿಯಮಿತವಾಗಿ ಅಂಡಾಣುಗಳು ಬಿಡುಗಡೆಯಾಗುವುದಿಲ್ಲ ಹಾಗೂ ಅಥವಾ ಸಂತಾನೋತ್ಪತ್ತಿಗೆ ಬೇಕಾದಷ್ಟು ಹಾರ್ಮೋನುಗಳನ್ನು ಉತ್ಪಾದಿಸುವುದಿಲ್ಲ.
ನತಾಶಾ (26) ಮತ್ತು ಆಕಾಶ್ (34) ದಂಪತಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಗರ್ಭ ಧರಿಸುವ ಪ್ರಯತ್ನ ವಿಫಲವಾಗಿತ್ತು. ವಿವಿಧೆಡೆ ವೈದ್ಯಕೀಯ ನೆರವಿಗೆ ಮುಂದಾದಾಗ ಅಕಾಲಿಕ ಅಂಡಾಶಯ ನ್ಯೂನ್ಯತೆ ತಿಳಿದುಬಂತು. ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಕಾರಣವಾಗುವ ಆಂಟಿ-ಮುಲ್ಲೇರಿಯನ್ ಹಾರ್ಮೋನ್ ಮಟ್ಟ ಕಡಿಮೆ ಇರುವುದು ಪತ್ತೆಯಾಯಿತು. 20ನೇ ವಯಸ್ಸಿನಲ್ಲೇ ಕಡಿಮೆ ಅಂಡಾಣುಗಳ ಸಂಗ್ರಹ, ಅಕಾಲಿಕ ಅಂಡಾಶಯದ ನ್ಯೂನ್ಯತೆಯ ಸಂಕೇತ ಕಂಡುಬಂದ ಹಿನ್ನೆಲೆಯಲ್ಲಿ ಗರ್ಭ ಧರಿಸುವ ಸಾಧ್ಯತೆ ಕಡಿಮೆ ಎಂದು ಸಲಹೆ ನೀಡಲಾಯಿತು.
ಈ ದಂಪತಿ ಮಂಗಳೂರಿನ ನೋವಾ ಐವಿಎಫ್ ಫರ್ಟಿಲಿಟಿಗೆ ಭೇಟಿ ನೀಡಿದರು. ತಪಾಸಣೆ ನಡೆಸಿದ ವೈದ್ಯರ ತಂಡ ಅಂಡೋತ್ಪತ್ತಿ ಮಾಡುವ ಮೊದಲು ಒಂದೇ ಆರೋಗ್ಯಕರ ಅಂಡಾಣುವನ್ನು ಪಡೆಯಿತು. ಪ್ರೌಢ ಅಂಡಾಣುವನ್ನು ಐಸಿಎಸ್‌ಇ (ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್) ಮೂಲಕ ಯಶಸ್ವಿಯಾಗಿ ಸಂಗ್ರಹಿಸಿ ಫಲವತ್ತಗೊಳಿಸಲಾಯಿತು. ಈ ವಿಧಾನದಲ್ಲಿ ಆರೋಗ್ಯಕರ ವೀರ್ಯವನ್ನು ಬಳಸಿ ಭ್ರೂಣದ ರಚನೆಗೆ ಆರೋಗ್ಯಕರ ಅಂಡಾಣುವಿನೊಂದಿಗೆ ಪ್ರಯೋಗಾಲಯದಲ್ಲಿ ಫಲವತ್ತಗೊಳಿಸಲಾಗುತ್ತದೆ ಎಂದು ಮಂಗಳೂರಿನ ನೋವಾ ಐವಿಎಫ್ ಫರ್ಟಿಲಿಟಿಯ ಫರ್ಟಿಲಿಟಿ ತಜ್ಞ ಡಾ. ಶಾವೀಜ್ ಫೈಜಿ ಹೇಳಿದ್ದಾರೆ.