ಮಹಜರು ವೇಳೆ ಮತ್ತೆ ಅವಶೇಷ ಪತ್ತೆ?
ಮಂಗಳೂರು: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟ ಸೌಜನ್ಯಳ ಮಾವ ವಿಠಲ ಗೌಡನ ಸ್ಥಳ ಮಹಜರು ವೇಳೆ ಸ್ಥಳದ ಮಣ್ಣನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಎಸ್‌ಐಟಿ ತಂಡ ಕಳುಹಿಸಿದೆ. ಈ ಸ್ಥಳದಲ್ಲಿ ಮತ್ತೆ ಎಲುಬಿನ ಅವಶೇಷ ಪತ್ತೆಯಾಗಿದೆ ಎಂದು ಹೇಳಲಾಗಿದ್ದರೂ ಎಸ್‌ಐಟಿ ಅದನ್ನು ದೃಢಪಡಿಸಿಲ್ಲ.
ಬುರುಡೆ ಕೇಸ್ ವೇಳೆ ಯುಟ್ಯೂಬ್‌ನಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಮಿಥ್ಯಾರೋಪ ಮಾಡಿದ ಕೇರಳದ ಮನಾಫ್‌ಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ. ಇದೇ ರೀತಿ ಬುರುಡೆ ಗ್ಯಾಂಗ್ ಜೊತೆ ಸಂಪರ್ಕದಲ್ಲಿದ್ದ ಕೇರಳ ಸಿಪಿಎಂ ಸಂಸದ ಮಂಜುನಾಥ್‌ಗೂ ವಿಚಾರಣೆಗೆ ನೋಟಿಸ್ ನೀಡಲು ಎಸ್‌ಐಟಿ ಸಿದ್ಧತೆ ನಡೆಸಿದೆ. ಭಾನುವಾರ ರಜಾ ದಿನವಾದ್ದರಿಂದ ಯಾರನ್ನೂ ಎಸ್‌ಐಟಿ ವಿಚಾರಣೆ ನಡೆಸಿಲ್ಲ.
ಬುರುಡೆ ಕೇಸ್‌ನಲ್ಲಿ ಸೌಜನ್ಯ ಪರ ಹೋರಾಟಗಾರ ಜಯಂತ್, ಗಿರೀಶ್ ಮಟ್ಟೆಣ್ಣವರ್, ಯೂಟ್ಯೂಬರ್ ಅಭಿಷೇಕ್‌ನ್ನು ಶನಿವಾರ ತಡರಾತ್ರಿ ವರೆಗೂ ವಿಚಾರಣೆ ನಡೆಸಲಾಗಿದೆ. ಮತ್ತೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿದೆ. ಆದರೆ ಭಾನುವಾರ ಮಧ್ಯಾಹ್ನ ವರೆಗೆ ಯಾವುದೇ ವಿಚಾರಣೆ ನಡೆದಿಲ್ಲ. ಶನಿವಾರ ರಾತ್ರಿ ವಿಠಲ ಗೌಡ ಮತ್ತು ಆತನೊಂದಿಗೆ ಇದ್ದ ಪ್ರದೀಪ್ ಗೌಡನನ್ನೂ ಎಸ್‌ಐಟಿ ವಿಚಾರಣೆ ನಡೆಸಿ ಬುರುಡೆಗೆ ಸಂಬಂಧಿಸಿ ಸಾಕಷ್ಟು ಮಾಹಿತಿ ಕಲೆ ಹಾಕಿದೆ.
ಶಿವಮೊಗ್ಗ ಜೈಲಿನಲ್ಲಿ ಬಂಧನದಲ್ಲಿ ಇರುವ ಬುರುಡೆ ಕೇಸಿನ ಆರೋಪಿ ಚಿನ್ನಯ್ಯನ ಜಾಮೀನಿಗೆ ಸರ್ಕಾರ ನೀಡಿದ ವಕೀಲರು ಅರ್ಜಿ ಸಲ್ಲಿಸಿದ್ದು, ಇದು ಸೆ.9 ರಂದು ವಿಚಾರಣೆಗೆ ಬರಲಿದೆ. ಶಿವಮೊಗ್ಗ ಜೈಲಿಗೆ ತೆರಳುವಾಗ ಚಿನ್ನಯ್ಯ ಕಣ್ಣೀರು ಹಾಕಿದ್ದು, ತಾನು ತಪ್ಪಿನಲ್ಲಿ ಸಿಲುಕಿಕೊಂಡ ಬಗ್ಗೆ ಪಶ್ಚತ್ತಾಪ ಪಟ್ಟಿದ್ದಾನೆ ಎನ್ನಲಾಗಿದೆ. ಅಲ್ಲಿ ವಿಚಾರಣಾಧೀನ ಕೈದಿಗೆ 1104/25 ಸಂಖ್ಯೆ ನೀಡಲಾಗಿದೆ.