
ದೇವಳದ ಸೇವಾ ಮೌಲ್ಯ ಏರಿಸಿದ್ದು ಕಾಂಗ್ರೆಸ್ ಸರಕಾರವೆಂಬುದು ಬಿಜೆಪಿಯಿಂದ ಅಪಪ್ರಚಾರ: ಬ್ಲಾಕ್ ಕಾಂಗ್ರೆಸ್ ದೂರು
Sunday, September 21, 2025
ಮೂಡುಬಿದಿರೆ: ವಿವಿಧ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಟೀಲು ದೇವಳದ ಆಡಳಿತ ಮಂಡಳಿಯವರು ವಿವಿಧ ಸೇವೆಗಳ ಮೌಲ್ಯವನ್ನು ಏರಿಸಿದ್ದರೂ ಅದು ಕಾಂಗ್ರೆಸ್ ಸರಕಾರವೇ ಏರಿಸಿದ್ದು ಎಂದು ಜನಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಮೂಡುವಂತೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯ ವಿರುದ್ಧ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.
ಬಿಜೆಪಿಯ ಐಟಿ ಸೆಲ್,ವಾಟ್ಸಾಪ್ ಮತ್ತು ಫೇಸ್ ಬುಕ್ ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕುರಿತಾಗಿ ಅಪಪ್ರಚಾರ ಮಾಡಲಾಗಿತ್ತು.
ಈ ರೀತಿ ಅಪಪ್ರಚಾರ ಮಾಡಿ ಜನರಿಗೆ ಸರಕಾರದ ಮೇಲೆ ಅಸಮಾಧಾನ ಮೂಡುವಂತೆ ಮಾಡಿದ್ದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರಲ್ಲಿ ದೂರು ನೀಡಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಯುವ ಕಾಂಗ್ರೆಸ್ ಅಧ್ಯಕ್ಷ ಅನೀಶ್ ಡಿಸೋಜ, ಕೆ.ಡಿ.ಪಿ.ಸಮಿತಿ ಸದಸ್ಯ ಪ್ರವೀಣ್ ಇರುವೈಲ್, ನಿತಿನ್ ಇರುವೈಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.