ಲಂಚ ನೀಡಿದವರನ್ನು ಕರೆದುಕೊಂಡು ಪ್ರಮಾಣಕ್ಕೆ ಬರಲಿ ಶಾಸಕರ ಆರೋಪಕ್ಕೆ ಬಿಜೆಪಿ ಪ್ರತ್ಯುತ್ತರದ ಸವಾಲು

ಲಂಚ ನೀಡಿದವರನ್ನು ಕರೆದುಕೊಂಡು ಪ್ರಮಾಣಕ್ಕೆ ಬರಲಿ ಶಾಸಕರ ಆರೋಪಕ್ಕೆ ಬಿಜೆಪಿ ಪ್ರತ್ಯುತ್ತರದ ಸವಾಲು

ಪುತ್ತೂರು; ಮಾಜಿ ಶಾಸಕರಿಗೆ ಲಂಚ ನೀಡಿದ್ದಾರೆ ಎನ್ನಲಾದ 47 ಮಂದಿಯನ್ನು ಕರೆದುಕೊಂಡು ಬರಲಿ. ನಾವು ಮಾಜಿ ಶಾಸಕರನ್ನು ಹಾಗೂ ಅಂದಿನ ಅಕ್ರಮಸಕ್ರಮ ಸಮಿತಿ ಸದಸ್ಯರನ್ನು ಕರೆದು ತರುತ್ತೇವೆ. ಶಾಸಕರು ಹೇಳಿದ ಜಾಗಕ್ಕೆ ಹಾಗೂ ಹೇಳಿದ ಸಮಯಕ್ಕೆ ಬರಲು ಸಿದ್ಧ. ಅಲ್ಲಿ ಶಾಸಕರು ಪ್ರಮಾಣ ಮಾಡಲಿ. ಹಸು ಮಾರಿ ಮಾಜಿ ಶಾಸಕರಿಗೆ ಲಂಚ ನೀಡಿದ್ದಾರೆ ಎನ್ನಲಾದ ಮಹಿಳೆಯನ್ನೂ ಕರೆದು ತರಲಿ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಶಾಸಕ ಅಶೋಕ್ ರೈ ಅವರಿಗೆ ಸವಾಲು ಹಾಕಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಸಂಜೀವ ಮಠಂದೂರು ಶಾಸಕರಾಗಿದ್ದ ಸಂದರ್ಭದಲ್ಲಿ ಅಕ್ರಮ ಸಕ್ರಮ ಮಂಜೂರಾತಿಗೆ ೪೭ ಫಲಾನುಭವಿಗಳಿಂದ ದೊಡ್ಡ ಮೊತ್ತದ ಲಂಚ ಸ್ವೀಕಾರ ಮಾಡಿದ್ದರು ಎಂದು ಶಾಸಕ ಅಶೋಕ್ ರೈ ಮಾಡಿದ್ದಾರೆ.  ಈ ಬಗ್ಗೆ ನಾವು ಪ್ರಮಾಣಕ್ಕೂ ಸಿದ್ದವಾಗಿದ್ದೇವೆ. ಶಾಸಕರೂ ಸಿದ್ಧವಾಗಲಿ ಎಂದರು.

ಅಶೋಕ್ ರೈ ಶಾಸಕರಾದ ಮೇಲೆ ಪುತ್ತೂರಿನ ಅಧಿಕಾರಿ ವಲಯದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ. ತಾಲೂಕು ಕಚೇರಿ ಸಿಬ್ಬಂದಿಯೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಹಸೀಲ್ದಾರ್ ಅವರು ಕಚೇರಿಗೆ ಬರುತ್ತಿಲ್ಲ. ಇದನ್ನೆಲ್ಲ ಮರೆಮಾಚಲು ಹಾಲಿ ಶಾಸಕರು ಮಾಜಿ ಶಾಸಕರ ಮೇರೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಬಿಜೆಪಿಯಲ್ಲಿದ್ದಾಗ ಬಿಜೆಪಿ ಶಾಸಕರು ಭ್ರಷ್ಟಾಚಾರ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿದ್ದೀರಿ. ಆವತ್ತೇ ಇದನ್ನು ಹೇಳುವ ಬದಲು ಈಗ ಕಾಂಗ್ರೆಸ್‌ಗೆ ಬಂದು ಶಾಸಕರಾಗಿ ೨ ವರ್ಷಗಳ ಬಳಿಕ ಹೇಳುತ್ತಿರುವುದರ ಹಿಂದಿನ ಅಸಲೀಯತ್ತೇನು ಎಂದು ಪ್ರಶ್ನಿಸಿದರು.

ಮಾಜಿ ಶಾಸಕರ ಬಗ್ಗೆ ಶಾಸಕರು ತೀರಾ ಲಘುವಾಗಿ ಮಾತನಾಡುವುದನ್ನು ಕೇಳುತ್ತಿದ್ದೇವೆ. ಜಾತಕ ಬಯಲು ಮಾಡುತ್ತೇನೆ ಎಂಬ ಪದ ಬಳಸುತ್ತಿದ್ದಾರೆ. ನಾವು ಸುಮ್ಮನೆ ಕುಳಿತಿಲ್ಲ. ಸಮಯ ಬಂದಾಗ ಶಾಸಕರ ಜಾತಕ ಬಯಲು ಮಾಡಲು ಕೂಡ ಗೊತ್ತಿದೆ. ಗಾಜಿನ ಮನೆಯಲ್ಲಿ ನಿಂತುಕೊಂಡು ಕಲ್ಲು ಹೊಡೆಯುವ ಕೆಲಸ ಮಾಡಬೇಡಿ ಎಂದು ಹೇಳಿದ ಅವರು, ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಜಿ ಶಾಸಕರು ಮಾತನಾಡಿದರೆ, ಏನೂ ಮಾತನಾಡಬಾರದು ಎಂಬ ನೆಲೆಯಲ್ಲಿ ಶಾಸಕರು ಪ್ರತಿಕ್ರಿಯೆ ನೀಡುತ್ತಿರುವುದು ಆಭಾಸ ಎಂದರು.

ಬಿಜೆಪಿಯ ಬೂತ್ ಅಧ್ಯಕ್ಷ, ಶಕ್ತಿ ಕೇಂದ್ರದ ಅಧ್ಯಕ್ಷರಿಗೆ ನಾನು ಶಾಸಕನಾದ ಮೇಲೆ ಅಕ್ರಮ ಸಕ್ರಮ ಮಾಡಿಕೊಟ್ಟಿದ್ದೇನೆ. ಹಿಂದಿನ ಬಿಜೆಪಿ ಶಾಸಕರಿಂದ ಇದು ಆಗಿರಲಿಲ್ಲ ಎಂಬ ಅಶೋಕ್ ರೈ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಸಂಜೀವ ಮಠಂದೂರು ಶಾಸಕರಾಗಿದ್ದಾಗಲೂ ಕಾಂಗ್ರೆಸ್, ಬಿಜೆಪಿ ಎಂದು ನೋಡದೆ, ಜಾತಿ- ಧರ್ಮ ನೋಡದೆ ಎಲ್ಲ ಮತದಾರರ ಸೇವೆ ಮಾಡಿದ್ದರು. ಅದು ಶಾಸಕರಾದವರ ಜವಾಬ್ದಾರಿ ಎಂದರು.

ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಪಕ್ಷದ ಮುಖಂಡರಾದ ಯುವರಾಜ್ ಪೆರಿಯತ್ತೋಡಿ, ರಾಜೇಶ್ ಬನ್ನೂರು ಉಪಸ್ಥಿತರಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article