ಹುಲಿ ದಾಳಿಗೆ ಜಾನುವಾರು ಮೇಯಿಸುತ್ತಿದ್ದ ರೈತ ಬಲಿ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಮತ್ತೊಮ್ಮೆ ಹುಲಿ ದಾಳಿ ಮಾಡಿದ ಘಟನೆ ನಡೆದಿದೆ.
ರೈತರೊಬ್ಬರು ಗದ್ದೆಯಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ದಾಳಿ ನಡೆಸಿದ ಹುಲಿ ಎಳೆದೊಯ್ಯುವ ವಿಫಲ ಯತ್ನ ನಡೆಸಿದೆ. ಬಡಗಲಪುರದಲ್ಲಿ ನಡೆದ ಘಟನೆ ಮಾಸುವ ಮುನ್ನವೇ ನರಹಂತಕ ಹುಲಿಗೆ ಮುಳ್ಳೂರಿನ ರೈತ ಬಲಿಯಾದ ಘಟನೆ ಅ.26ರಂದು ನಡೆದಿದೆ.
ಮುಳ್ಳೂರು ಗ್ರಾಮದ ರಾಜಶೇಖರ ಮೂರ್ತಿ (55) ಹುಲಿ ದಾಳಿಗೆ ಬಲಿಯಾದ ರೈತ.
ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಆ ಸ್ಥಳದಲ್ಲಿ ಇದೀಗ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಸರಗೂರು ಪೊಲೀಸರು ಬೀಡುಬಿಟ್ಟಿದ್ದಾರೆ.
ಮುಳ್ಳೂರು ಮತ್ತು ಸುತ್ತಮುತ್ತಲು ಗ್ರಾಮದ ರೈತರು, ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಳ್ಳೂರು ಗ್ರಾಮದ ಸಮೀಪ ಯಾವುದೇ ಕಾಡು ಪ್ರದೇಶ ಇಲ್ಲದಿದ್ದರೂ ಹುಲಿ ದಾಳಿ ಸಾರ್ವಜನಿಕರಿಗೆ ಆತಂಕ ಸೃಷ್ಟಿಸಿದೆ.
ಇತ್ತೀಚಿಗೆ ಬಡಗಲಪುರ ಗ್ರಾಮದಲ್ಲಿ ಓರ್ವ ರೈತನ ಮೇಲೆ ಹುಲಿ ದಾಳಿ ನಡೆಸಿತ್ತು. ಬಳಿಕ ದಸರಾ ಆನೆಗಳ ನೆರವಿನಿಂದ ಕೂಂಬಿಗ್ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಹುಲಿ ಸೆರೆಯಾದ ಹಿನ್ನಲೆ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮತ್ತೊಂದು ಹುಲಿ ರೈತನ ಮೇಲೆ ದಾಳಿ ನಡೆಸಿರುವುದು ಸ್ಥಳೀಯರ ನಿದ್ದೆ ಕೆಡಿಸಿದೆ.