ಕುಕ್ಕೆ ದೇವಳದ ಶೌಚಾಲಯ ತೊಳೆಯಲು ಎಸ್‌ಸಿಗಳ ಬಳಕೆ: ಲಕ್ಷ್ಮೀ ಸುಬ್ರಹ್ಮಣ್ಯ

ಕುಕ್ಕೆ ದೇವಳದ ಶೌಚಾಲಯ ತೊಳೆಯಲು ಎಸ್‌ಸಿಗಳ ಬಳಕೆ: ಲಕ್ಷ್ಮೀ ಸುಬ್ರಹ್ಮಣ್ಯ


ಪುತ್ತೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಿವಿಧ ಕೆಲಸಗಳಿಗೆ ಟೆಂಡರ್ ಮೂಲಕ ಕೆಲಸಗಾರರನ್ನು ನೇಮಿಸಲಾಗುತ್ತಿದ್ದು, ಈ ಪೈಕಿ ವಸತಿ ನಿಲಯ ಹಾಗೂ ಇನ್ನಿತರ ಕಡೆಗಳಲ್ಲಿರುವ ಶೌಚಾಲಯಗಳನ್ನು ತೊಳೆಯಲು ಎಸ್‌ಸಿಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ಇತರ ಸಮುದಾಯದ ಕೆಲಸಗಾರರನ್ನು ಇತರ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಎಸ್‌ಸಿಗಳನ್ನು ಕೇವಲ ಶೌಚಾಲಯ ತೊಳೆಯಲು ಮಾತ್ರ ಸೀಮಿತಗೊಳಿಸದೆ ಇತರ ಕೆಲಸಗಳಿಗೂ ಬಳಸಿಕೊಳ್ಳುವಂತಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮೀ ಸುಬ್ರಹ್ಮಣ್ಯ ಅವರು ಆಗ್ರಹಿಸಿದರು. 

ಪುತ್ತೂರು ಉಪವಿಭಾಗ ಮಟ್ಟದ ಎಸ್‌ಸಿ ಎಸ್‌ಟಿ ಪೊಲೀಸ್ ಕುಂದು ಕೊರತೆಗಳ ಸಭೆ ಭಾನುವಾರ ಪುತ್ತೂರಿನ ತಾಪಂ ಸಭಾಂಗಣದಲ್ಲಿ ಪುತ್ತೂರು ಉಪವಿಭಾಗ ಮಟ್ಟದ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ನಾಗೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಲಕ್ಷ್ಮೀ ಸುಬ್ರಹ್ಮಣ್ಯ ಅವರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಟೆಂಡರ್ ಕರೆಯಲಾಗುತ್ತಿದ್ದು, ಇದರಲ್ಲಿ ಎಲ್ಲಾ ಸಮುದಾಯದವರಿಗೂ ಅವಕಾಶ ನೀಡಲಾಗುತ್ತಿದೆ. ಈ ಪೈಕಿ ಶೌಚಾಲಯ ತೊಳೆಯಲು ಎಸ್‌ಸಿಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಇತರ ಎಲ್ಲಾ ಕೆಲಸಗಾರರಿಗೆ ವಾರಕ್ಕೊಮ್ಮೆ ಕೆಲಸದಲ್ಲಿ ಬದಲಾವಣೆಯನ್ನು ಮಾಡಲಾಗುತ್ತಿದ್ದು, ಶೌಚಾಲಯ ತೊಳೆಯುವವರನ್ನು ಮಾತ್ರ  ಬದಲಾವಣೆ ಮಾಡುತ್ತಿಲ್ಲ. ಇಂತಹ ತಾರತಮ್ಯವನ್ನು ಸರಿಯಲ್ಲ. ದಲಿತರಿಗೂ ಎಲ್ಲಾ ಕೆಲಸ ಮಾಡಲು ಅವಕಾಶ ಕಲ್ಪಿಸುವಂತಾಗಬೇಕು ಎಂದು ಆಗ್ರಹಿಸಿದರು.  ಇದಕ್ಕೆ ಉತ್ತರಿಸಿದ ಅರುಣ್ ನಾಗೇಗೌಡ ಅವರು ಈ ಬಗ್ಗೆ ಸಂಬಂಧಿಸಿದವರಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು. 

ಕಡಬ ತಾಲೂಕಿನ ಹೊಸ್ಮಠದಲ್ಲಿ ಮಹಿಳೆಯೊಬ್ಬರು ಎಸ್‌ಸಿ ಮತ್ತು ಎಸ್‌ಟಿ ಮಹಿಳೆಯರ ಸ್ವ ಸಹಾಯ ಗುಂಪುಗಳನ್ನು ಮಾಡಿ ಸುಮಾರು 12 ಮಂದಿಯಿಂದ ತಲಾ ೨೫ ಸಾವಿರ ಸಂಗ್ರಹಿಸಿ ಪರಾರಿಯಾಗಿದ್ದಾರೆ. ಅವರ ಮೇಲೆ ಸೂಕ್ತ ಕ್ರಮಗಳಾಗಬೇಕು ಎಂದು ರಾಜು ಹೊಸ್ಮಠ ಆಗ್ರಹಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಬಯಸಿದ ಅರುಣ್ ನಾಗೇಗೌಡ ಅವರು ಅನ್ಯಾಯ ಆಗಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಅದಕ್ಕೂ ಮೊದಲು ಅವರಿಂದ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ಪ್ಯಾರಾ ಮೆಡಿಕಲ್ ಕಾಲೇಜ್‌ನಲ್ಲಿ ಎಸ್‌ಸಿ ವಿದ್ಯಾರ್ಥಿನಿಯಿಂದ ಡಾಕ್ಯುಮೆಂಟ್ ನೀಡಲು ಹೆಚ್ಚುವರಿಯಾಗಿ ೫ಸಾವಿರ ರೂಪಾಯಿ ಹಣ ಪಡೆದುಕೊಳ್ಳಲಾಗಿದೆ. ವೈಯಕ್ತಿಕ ಕಾರಣಗಳಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು, ಬಡ ಕುಟುಂಬದ ಈ ವಿದ್ಯಾರ್ಥಿನಿಗೆ ಇದರಿಂದಾಗಿ ಆರ್ಥಿಕ ನಷ್ಟವಾಗಿದ್ದು, ಅದನ್ನು ಹಿಂದಿರುಗಿಸಿ ಕೊಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆನಂದ ಬೆಳ್ಳಾರೆ ಆಗ್ರಹಿಸಿದರು. ಈ ಬಗ್ಗೆ ಕಾಲೇಜ್‌ಗೆ ಭೇಟಿ ನೀಡಿ ವಿಚಾರಿಸುವುದಾಗಿ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ ಭರವಸೆ ನೀಡಿದರು. 

ವೇದಿಕೆಯಲ್ಲಿ ಪುತ್ತೂರು ಪೋಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ, ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಪುತ್ತೂರು ಮಹಿಳಾ ಪೊಲೀಸ್ ಠಾಣಾಧಿಕಾರಿ ಸುನಿಲ್, ಸಮುದಾಯದ ಪ್ರಮುಖರಾದ ಅಚ್ಚುತ ಬಿ, ಅಶೋಕ ಬ್ರಹ್ಮನಗರ, ಸೋಮನಾಥ ಬ್ರಹ್ಮನಗರ, ಎನ್.ವಿಶ್ವನಾಥ್, ಪ್ರವೀಣ್ ಕುಮಾರ್, ಕೊರಗಪ್ಪ, ಕುಸುಮ, ಹೇಮಾವತಿ, ಪ್ರಾಣೇಶ್, ಸೀತಾಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article