ಇನ್ಸ್‌ಪೆಕ್ಟರ್ ವಿರುದ್ಧ ವಕೀಲರು ಪೊಲೀಸ್ ಆಯುಕ್ತರಿಗೆ ದೂರು
ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳಾ ಠಾಣೆಗೆ ತೆರಳಿದ ತನ್ನನ್ನು ಇನ್ಸ್‌ಪೆಕ್ಟರ್ ನಿಂದಿಸಿದ್ದಾರೆ ಎಂದು ವಕೀಲ ನಿತಿನ್ ಕುತ್ತಾರ್ ಅಖಿಲ ಭಾರತ ವಕೀಲರ ಒಕ್ಕೂಟದ ನಿಯೋಗದ ಸಮ್ಮುಖ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನ.15ರಂದು ಕೌಟುಂಬಿಕ ವಿಚಾರವಾಗಿ ಕಕ್ಷಿದಾರರ ಪರವಾಗಿ ಠಾಣೆಗೆ ತೆರಳಿದಾಗ ಇನ್ಸ್‌ಪೆಕ್ಟರ್ ಬಾಲಕೃಷ್ಣ ಕಕ್ಷಿದಾರರೊಂದಿಗೆ ಅನುಚಿತವಾಗಿ ವರ್ತಿಸಿ ಅವರ ಬಳಿ ಇರುವ ಮಗುವಿನ ಚಿನ್ನ ಈಗಲೇ ಠಾಣೆಗೆ ತಂದುಕೊಡಬೇಕು.ಇಲ್ಲದಿದ್ದಲ್ಲಿ ಪ್ರಕರಣ ದಾಖಲಿಸಿ, ಜೈಲಿಗೆ ಹಾಕುತ್ತೇನೆ ಎಂದಿದ್ದಾರೆ. ಅಲ್ಲದೆ ತನ್ನನ್ನು ಏಕವಚನದಲ್ಲಿ ನಿಂದಿಸಿ ನಿನ್ನ ಹೋರಾಟ ಹೊರಗೆ ಇರಲಿ, ಒದ್ದು ಬಿಡುತ್ತೇನೆ ಎಂದು ಬೆದರಿಸಿದ್ದಾರೆ. ತಾನು ಪೊಲೀಸ್ ಕಮಿಷನರ್ಗೆ ದೂರು ನೀಡುತ್ತೇನೆ ಎಂದಾಗಲೂ ಮತ್ತೆ ಅದೇ ರೀತಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಮಿಷನರ್ಗೆ ದೂರು ಸಲ್ಲಿಸಿದ ನಿಯೋಗದಲ್ಲಿ ಹಿರಿಯ ವಕೀಲ ರಾಮಚಂದ್ರ ಬಬ್ಬುಕಟ್ಟೆ, ಸದಸ್ಯರಾದ ಸುನಂದಾ ಕೊಂಚಾಡಿ, ಮನೋಜ್ ವಾಮಂಜೂರು, ಚರಣ್ ಶೆಟ್ಟಿ, ಹಸೈನಾರ್ ಗುರುಪುರ ಹಾಜರಿದ್ದರು.