ಸ್ಟೇಷನ್‌ಗಳಲ್ಲಿ ಪೊಲೀಸರು ನೈತಿಕ ಪಾಠ ಬೋಧಿಸಲಿ, ಪ್ರಾರ್ಥನಾಲಯಗಳಲ್ಲಿ ಅಲ್ಲ: ಕೆ.ಅಶ್ರಫ್
ಮಂಗಳೂರು: ದ.ಕ. ಜಿಲ್ಲಾ ವ್ಯಾಪ್ತಿಯ ಪೊಲೀಸರು ಗೋಸಂಬಂಧಿತ ಕಾನೂನುಗಳ ಬಗ್ಗೆ ನೈತಿಕ ಪಾಠ ಬೋಧಿಸಲು ತಮ್ಮ ವ್ಯಾಪ್ತಿಯ ಸ್ಟೇಷನ್‌ಗಳನ್ನು ಬಳಕೆ ಮಾಡಲಿ, ಪ್ರಾರ್ಥನಾ ಸ್ಥಳಗಳನ್ನು ಅಲ್ಲ ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ವ್ಯಾಪ್ತಿಯ ಪೊಲೀಸರು ಗೋಸಂಬಂಧಿತ ಕಾನೂನು, ನಿಯಮಾವಳಿ, ನಿರ್ದೇಶನಗಳ ನೈತಿಕ ಪಾಠ ಬೋಧಿಸಲು ಒಂದು ನಿರ್ಧಿಷ್ಟ ಸಮುದಾಯದ ಪ್ರಾರ್ಥನಾ ಸ್ಥಳಗಳನ್ನು ಬಳಕೆ ಮಾಡುತ್ತಿರುವುದು ಅಸಾಂವಿಧಾನಿಕ. ಪ್ರಾರ್ಥನಾ ಸ್ಥಳಗಳು ಶೃದ್ಧಾ ಕೇಂದ್ರಗಳು ಆಗಿವೆ. ಇದು ಧಾರ್ಮಿಕ ನಂಬಿಕೆಯನ್ನು ಬೆಸೆದುಕೊಂಡಿರುವುದರಿಂದ ದೇಶದ ಅಥವಾ ರಾಜ್ಯದ ಕಾನೂನುಗಳ ಬಗ್ಗೆ ಬೋಧಿಸಲು ಇರುವ ಪಾಠ ಶಾಲೆ ಅಲ್ಲ.
ಪ್ರತಿ ಧಾರ್ಮಿಕ ಬೋಧನೆಗಳು ಸತ್ಕರ್ಮವನ್ನೇ ಬೋಧಿಸುತ್ತದೆ ಹೊರತು ಯಾವುದೇ ಅಪರಾಧವನ್ನು ಉತ್ತೇಜಿಸುವುದಿಲ್ಲ ಎಂಬುದನ್ನು ಪೊಲೀಸರು ಮತ್ತು ಸರ್ಕಾರ ಅರಿಯಬೇಕು. ಒಂದು ನಿರ್ಧಿಷ್ಟ ಸಮುದಾಯದವರನ್ನು ಅಪರಾಧ ಶಂಕಿತರನ್ನಾಗಿಸುವುದು ಧಾರ್ಮಿಕ ಹಕ್ಕಿನ ಉಲ್ಲಂಘನೆ ಆಗಿದೆ ಎಂಬುದನ್ನು ಅರಿಯಬೇಕಿದೆ. ಪೊಲೀಸರು ತಕ್ಷಣ ಅವರ ಈ ನಡೆಯನ್ನು ತಡೆ ಹಿಡಿಯಬೇಕು.
ರಾಜ್ಯದಲ್ಲಿ ಆಡಳಿತ, ಕಾನೂನು, ಸುವ್ಯವಸ್ಥೆ ಜಾರಿಯಲ್ಲಿ ಇರುವಾಗ ಅಪರಾಧ ತಡೆಯಲು ಸ್ವಂತ ನಿಯಮ ಅಥವಾ ನಿಯಮ ಜಾರಿ ಅಥವಾ ನಿಷೇಧ ಜಾರಿಗೊಳಿಸಲಿ, ಹೊರತು ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸಿ ಅಘೋಷಿತ ಭಯ ಹುಟ್ಟಿಸುವುದು, ಪೊಲೀಸ್ ರಾಜ್ಯದ ಚಿಂತನೆ ಆಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಆಗಿದೆ.
ಪೊಲೀಸರು ಈ ಬಗ್ಗೆ ತಮ್ಮ ನಡೆಯನ್ನು ಮರು ಪರಿಶೀಲಿಸಿ ಈಗಾಗಲೇ ಆಗಿರುವ ಧಾರ್ಮಿಕ ಘಾಸಿಯನ್ನು ಶಮನಗೊಳಿಸಬೇಕು, ಇಲ್ಲವಾದಲ್ಲಿ ಜನರು ಸಂವಿಧಾನಿಕ ಹಕ್ಕುಗಳ ಬಗೆಗಿನ ನಂಬಿಕೆಯನ್ನು ಕಳೆದುಕೊಳ್ಳುವ ಸಂಧರ್ಭ ಸೃಷ್ಟಿಯಾಗಬಹುದು, ಹಾಗಾಗದಿರಲಿ. ಎಂದು ಕೆ.ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.