ಕರ್ಣಾಟಕ ಬ್ಯಾಂಕ್‌ನಿಂದ ಪಜೀರು ಗೋಶಾಲೆಗೆ ಮೇವು ಸಾಗಾಟಕ್ಕೆ ವಾಹನ ಹಸ್ತಾಂತರ
Tuesday, November 18, 2025
ಮಂಗಳೂರು: ಕಳೆದ 25 ವರ್ಷಗಳಿಂದ ಬೀಜಗುರಿಯ ಪಜೀರಿನಲ್ಲಿ ಗೋವನಿತಾಶ್ರಯ ಟ್ರಸ್ಟ್ ಗೋಸಂರಕ್ಷಣೆಯನ್ನು ಮಾಡಿಕೊಂಡು ಬರುತ್ತಿದ್ದು, ಇದರ ಸೇವಾ ಕಾರ್ಯಕ್ಕೆ ಕರ್ಣಾಟಕ ಬ್ಯಾಂಕ್ ತನ್ನ ಸಿಎಸ್‌ಆರ್ ನಿಧಿಯಿಂದ ಮೇವು ತರಲು ಟಾಟಾ 707 ವಾಹನವನ್ನು ಕೊಡುಗೆಯಾಗಿ ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರಾಘವೇಂದ್ರ ಭಟ್ ಅವರು ಟ್ರಸ್ಟ್‌ನ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಅವರಿಗೆ ಹಸ್ತಾಂತರಿಸಿದರು.
ಬಳಿಕ ಅಧ್ಯಕ್ಷರು ಮಾತನಾಡಿ, ಗೋಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್ ಸೇವಾ ರೂಪದಲ್ಲಿ ಈ ಕೊಡುಗೆಯನ್ನು ನೀಡಲಾಗಿದೆ ಎಂದು ಹೇಳಿದರು.
ಕರ್ಣಾಟಕ ಬ್ಯಾಂಕಿನ ಆಡಳಿತ ಮಂಡಳಿಯವರಿಗೆ ಟ್ರಸ್ಟಿನ ಕಾರ್ಯದರ್ಶಿ ಮನೋಹರ ಸುವರ್ಣ ಧನ್ಯವಾದ ತಿಳಿಸಿದರು.
ಟ್ರಸ್ಟಿಗಳಾದ ಡಾ. ಪಿ. ಅನಂತಕೃಷ್ಣ ಭಟ್, ಪೊಳಲಿ ಗಿರಿಪ್ರಕಾಶ್ ತಂತ್ರಿ, ವಿಶ್ವಹಿಂದೂ ಪರಿಷದ್‌ನ ಸಹ ಕೋಶಾಧಿಕಾರಿ ನಾಗೇಂದ್ರ ಕಡೇಗೋಳಿ ಉಪಸ್ಥಿತರಿದ್ದರು.