ನೈತಿಕತೆ ಮತ್ತು ಶಿಸ್ತು ವಿದ್ಯಾಭ್ಯಾಸದ ಅವಿಭಾಜ್ಯ ಅಂಗ: ಪ್ರೊ. ಪಿ.ಎಲ್. ಧರ್ಮ

ನೈತಿಕತೆ ಮತ್ತು ಶಿಸ್ತು ವಿದ್ಯಾಭ್ಯಾಸದ ಅವಿಭಾಜ್ಯ ಅಂಗ: ಪ್ರೊ. ಪಿ.ಎಲ್. ಧರ್ಮ


ಮಂಗಳೂರು: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜ ನಿರ್ಮಾಣದಲ್ಲಿ ಸಕಾರಾತ್ಮಕ ಪಾತ್ರವಹಿಸಬೇಕು. ನೈತಿಕತೆ ಮತ್ತು ಶಿಸ್ತು ವಿದ್ಯಾಭ್ಯಾಸದ ಅವಿಭಾಜ್ಯ ಅಂಗಗಳಾಗಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ. ಎಲ್. ಧರ್ಮ ಕರೆ ನೀಡಿದರು.

ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ನಡೆದ 2025-26ನೇ ಸಾಲಿನ ವಿದ್ಯಾರ್ಥಿ ಪರಿಷತ್ತನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಯಕತ್ವ ಗುಣ ಎಂದರೆ, ನಾನು ನನ್ನದು ಎಂಬ ಸಂಕುಚಿತ ಮನೋಭಾವವಲ್ಲ, ಬದಲಾಗಿ ಎಲ್ಲರಿಗೂ ಸ್ಪಂದಿಸುತ್ತಾ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಮುಂದುವರೆಯುವ ಹೃದಯ ವೈಶಾಲ್ಯ ಗುಣವಾಗಿದೆ ಎಂದು ಕಿವಿಮಾತು ಹೇಳಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಲಬುರ್ಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಜಾನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು, ವಿಶ್ವವಿದ್ಯಾನಿಲಯ ಹಂತದಲ್ಲಿ ನಾಯಕತ್ವ ವಹಿಸಿದ ವಿದ್ಯಾರ್ಥಿಗಳು ದೇಶದ ನಾಯಕತ್ವದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಆಡಳಿತದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಸಮಾಜದ ಸುಧಾರಣೆಗೆ ಮುಂದಾಗುವಂತೆ ಕರೆ ನೀಡಿದರು. 

ವಿಶ್ವವಿದ್ಯಾನಿಲಯಗಳಲ್ಲಿ ಓದಿ ಬೆಳೆದು ನಾಯಕತ್ವ ವಹಿಸಿದವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರುವುದರಿಂದ ಅವರು ಸಮಾಜವನ್ನು ಸಮರ್ಥವಾಗಿ ಮುನ್ನಡೆಸಲು ಶಕ್ತರಾಗಿರುತ್ತಾರೆ ಎಂದರು. ನಾವು ಕಲಿತ ಶಿಕ್ಷಣದಿಂದ ಗಳಿಸಿದ ಸಂಪತ್ತು, ಒಲಿತು, ನಾಯಕತ್ವ ಗುಣಗಳನ್ನು ಈ ಸಮಾಜಕ್ಕೆ ಮರಳಿಸುವ ಮೂಲಕ ಉತ್ತಮ ಸಮಾಜವನ್ನು ಕಟ್ಟುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು, ಶಿಕ್ಷಣದೊಂದಿಗೆ ನೈತಿಕತೆ ಹಾಗೂ ಜೀವನಮೌಲ್ಯ ಅಳವಡಿಸಿಕೊಂಡು ಸಮಾಜದಲ್ಲಿರುವ ಕೊರತೆಗಳನ್ನು ನೀಗಿಸುವ ಪ್ರಯತ್ನ ಮಾಡುವ ಎಂದು ಕರೆ ನೀಡಿದರು. 

ಮತ್ತೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಸಮಾಜದ ಉನ್ನತ ಸ್ಥಾನಗಳನ್ನು ಅಲಂಕರಿಸಿ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ರೂಪುಗೊಂಡಿರುವಂತೆಯೇ ಪ್ರಸ್ತುತ ವಿದ್ಯಾರ್ಥಿಗಳು ಕೂಡ ಚೆನ್ನಾಗಿ ಓದಿ ಉತ್ತಮ ಫಲಿತಾಂಶ ತಂದು ಕಾಲೇಜಿನ ಕೀರ್ತಿಯನ್ನೂ ಹೆಚ್ಚಿಸುವುದರೊಂದಿಗೆ ತಾವೂ ಕೂಡ ಉತ್ತಮ ಸಾಧನೆಗಳನ್ನು ಮಾಡಬೇಕೆಂದು ಕರೆನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್, ಇಂದಿಗೂ ನಮ್ಮ ಕಾಲೇಜಿನಲ್ಲಿ ಹಲವಾರು ವಿದ್ಯಾರ್ಥಿಗಳು ದುಡಿದುಕೊಂಡೇ ಓದುತ್ತಿದ್ದಾರೆ.  ವಿಶ್ವವಿದ್ಯಾನಿಲಯ ಕಾಲೇಜು ಹಲವಾರು ನಾಯಕರನ್ನು ಸೃಷ್ಟಿಸುತ್ತಾ ಬಂದಿದ್ದು, ಇಲ್ಲಿ ಓದಿದ ಪ್ರತೀ ವಿದ್ಯಾರ್ಥಿಗೂ ಜೀವನದ ಕಷ್ಟದ ಅರಿವಿದೆ. ಅನಗತ್ಯ ವಿಚಾರಗಳಿಗೆ ತಲೆಹಾಕದೆ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ನಾಯಕತ್ವವನ್ನು ಅರ್ಥಪೂರ್ಣವಾಗಿಸಬೇಕು ಎಂದು ವಿದ್ಯಾರ್ಥಿ ನಾಯಕರಿಗೆ ಕರೆನೀಡಿದರು.

ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಅಂತಿಮ ಬಿಬಿಎ ವಿದ್ಯಾರ್ಥಿ ಕಾರ್ತಿಕ್ ಸಿ ಆಚಾರ್ಯ, ಕಾರ್ಯದರ್ಶಿ ಅಂತಿಮ ಬಿಎ ವಿದ್ಯಾರ್ಥಿ ಕೃಷ್ಣ ಆರ್. ವಾಲಿಕರ್, ಸಹ ಕಾರ್ಯದರ್ಶಿ ಅಂತಿಮ ಬಿಬಿಎ ವಿದ್ಯಾರ್ಥಿನಿ ನಿಧಿ, ಲಲಿತ ಕಲಾ ಸಂಘದ ಕಾರ್ಯದರ್ಶಿ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಸುಪ್ರೀತಾ ಬಿ, ಲಲಿತಕಲಾ ಸಂಘದ ಸಹ ಕಾರ್ಯದರ್ಶಿ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ಶಿವಾನಿ ಕೆ ಒಳಗೊಂಡಂತೆ, ಎಲ್ಲಾ ತರಗತಿಯ ಪ್ರತಿನಿಧಿಗಳಿಗೆ ಕಾಲೇಜಿನ ಪ್ರತಿಜ್ಞಾ ವಿಧಿಯನ್ನು ಪ್ರಾಂಶುಪಾಲರು ಬೋಧಿಸಿದರು. 

ಪ್ರಾಸ್ತಾವಿಕ ನುಡಿಗಳನ್ನಾಡಿದ ವಿದ್ಯಾರ್ಥಿ ಪರಿಷತ್ತಿನ ಉಪನಿರ್ದೇಶಕ ಪ್ರೊ. ಜಯವಂತ ನಾಯಕ್, ಮುಖ್ಯ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ನಾಡಗೀತೆಯೊಂದಿಗೆ ಎನ್ಎಸ್ಎಸ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಂತಿಮ ಬಿ.ಎ ವಿದ್ಯಾರ್ಥಿನಿ ಪರಮೇಶ್ವರಿ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ಪರಿಷತ್ ನಾಯಕ ಕಾರ್ತಿಕ್ ಸಿ ಆಚಾರ್ಯ ವಂದಿಸಿದರು.  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article