ಹಣ ಮತ್ತು ಬಹುಮಾನಕ್ಕಾಗಿ ಸಾಹಿತ್ಯ ರಚನೆ ಸಲ್ಲದು, ಸಮಾಜ ಕಲ್ಯಾಣಕ್ಕಾಗಿ ಪ್ರೀತಿಯಿಂದ ಸಾಹಿತ್ಯ ರಚನೆ ಮಾಡಬೇಕು: ಪ್ರೊ. ಪ್ರೇಮಶೇಖರ
ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನ
ಕನ್ನಡ ಬೆಳೆಸಬೇಕಾದರೆ, ಕನ್ನಡ ಬಳಸಬೇಕು: ವಿಶ್ವೇಶ್ವರ ಭಟ್
ಅಧ್ಯಕ್ಷತೆ ವಹಿಸಿದ ‘ವಿಶ್ವವಾಣಿ’ ಪತ್ರಿಕೆಯ ಮುಖ್ಯ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಕನ್ನಡ ಬೆಳೆಸಬೇಕಾದರೆ, ಕನ್ನಡ ಬಳಸಬೇಕು ಎಂದು ಹೇಳಿದರು.
ಸಾಹಿತ್ಯ ಪುಸ್ತಕಕ್ಕೇ ಮಾತ್ರ ಸೀಮಿತವಾಗಬಾರದು. ಸಾಹಿತ್ಯವು ದೈನಂದಿನ ಬದುಕು ಮತ್ತು ಸಮಾಜಕ್ಕೆ ಸಂಬಂಧಪಟ್ಟಿದೆ. ಇಂಗ್ಲಿಷ್ ಪದಗಳ ಬಳಕೆಯಿಂದ ಕನ್ನಡ ಅಪಾಯದ ಅಂಚಿನಲ್ಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಧರ್ಮಸ್ಥಳದ ಕೊಡುಗೆಯನ್ನು ಅವರು ಶ್ಲಾಘಿಸಿದರು.
ಧರ್ಮಸ್ಥಳದ ಬಗ್ಗೆ ಇದ್ದ ಸಂಶಯದ ಗುಂಡಿಗಳೆಲ್ಲಾ ಮುಚ್ಚಿ ಹೋಗಿವೆ. ಬುರುಡೆಗಳು ಬರಿದಾಗಿವೆ. ಸುಳ್ಳು ಮಲಗಿದೆ. ಸತ್ಯ ಗೆದ್ದಿದೆ. ತನ್ಮೂಲಕ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಕಟವಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನಗುಮೊಗ, ಸ್ಥಿತಪ್ರಜ್ಞೆ ಮತ್ತು ನಿಷ್ಕಳಂಕ ವ್ಯಕ್ತಿತ್ವದಿಂದ ಅವರು ಮತ್ತೆ ಶೋಭಾಯಮಾನವಾಗಿ ಬೆಳಗುತ್ತಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಧರ್ಮಸ್ಥಳ ಕ್ಷೇತ್ರವು ಅಂತಾರಾಷ್ಟೀಯ ಮಟ್ಟದ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಇನ್ನಷ್ಟು ಬೆಳೆಯಲಿ, ಬೆಳಗಲಿ ಎಂದು ಅವರು ಹಾರೈಸಿದರು.
ಮಾನವೀಯತೆ, ಶಾಂತಿ ಮತ್ತು ಸೌಹಾರ್ದತೆಯನ್ನು ಮೂಡಿಸುವುದೇ ಸಾಹಿತ್ಯದ ಉದ್ದೇಶವಾಗಿದೆ: ಡಿ. ವೀರೇಂದ್ರ ಹೆಗ್ಗಡೆ
ಸಾಹಿತ್ಯ ಮತ್ತು ಜೀವನಕ್ಕೆ ಅವಿನಾಭಾವ ಸಂಬಂಧವಿದ್ದು, ಸರ್ವರ ಹಿತವನ್ನು ಬಯಸುವ ಸಾಹಿತ್ಯ ಸಾತ್ವಿಕವಾದ, ಸಭ್ಯ, ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡುತ್ತದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದರು.
ರಾಮಾಯಣ, ಮಹಾಭಾರತಗಳಿಂದ ಹಿಡಿದು ಆಧುನಿಕ ಸಾಹಿತ್ಯದ ತನಕ ಸಾಹಿತ್ಯವು ಆದರ್ಶ ಜೀವನವನ್ನು ರೂಪಿಸುತ್ತಾ ಬಂದಿದೆ. ಪುರಾಣಕಥೆಗಳು, ಧಾರ್ಮಿಕಕಥೆಗಳು ಮಾನವನ ಮೇಲೆ ಗಾಢ ಪರಿಣಾಮ ಬೀರಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ.
ಸಾಹಿತ್ಯವು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ಇಂದಿನ ಆಧುನಿಕ ಶಿಕ್ಷಣಪದ್ಧತಿಯಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಸಾಹಿತ್ಯವಿಲ್ಲದೆ ಜೀವನವಿಲ್ಲ, ಜನಜೀವನವಿಲ್ಲದೆ ಸಾಹಿತ್ಯವಿಲ್ಲ ಎಂಬ ಮಾತಿನಂತೆ, ಸಭ್ಯ, ಸುಸಂಸ್ಕೃತ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ ಪ್ರಮುಖ ಪಾತ್ರವಹಿಸುತ್ತದೆ. ಸರ್ವರ ಹಿತವನ್ನು ಬಯಸುವ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಡಿಜಿಟಲ್ ಮಾಧ್ಯಮದ ಮೂಲಕ ಇಂದು ಅನೇಕ ಬರಹಗಾರರು ರೂಪುಗೊಳ್ಳುತ್ತಿದ್ದಾರೆ. ಅಂತರ್ಜಾಲದಲ್ಲಿ ಸಾಹಿತ್ಯ, ಕಲೆ, ಸಂಗೀತದ ಬಗ್ಯೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಆಧುನಿಕ ತಂತ್ರಜ್ಞಾನದ ಬಳಕೆ ಹೊಸ ಮನ್ವಂತರವನ್ನೇ ಸೃಷ್ಠಿಸಿದೆ.
ಧರ್ಮಸ್ಥಳದಿಂದ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ: ಧರ್ಮಸ್ಥಳದಲ್ಲಿ ಪ್ರತೀವರ್ಷ ಆಷಾಢ ಮತ್ತು ಶ್ರಾವಣಮಾಸದಲ್ಲಿ ಪುರಾಣ ವಾಚನ-ಪ್ರವಚನ, ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಸಂಕಿರಣ, ‘ಮಂಜುವಾಣಿ’ ಮತ್ತು ‘ನಿರಂತರ’ ಮಾಸಪತ್ರಿಕೆಗಳ ಪ್ರಕಾಶನ, ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ನೈತಿಕಮೌಲ್ಯಗಳ ಪುಸ್ತಕಗಳ ಪ್ರಕಾಶನ, ಯಕ್ಷಗಾನ ಬಯಲಾಟ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ 2200 ಗ್ರಂಥಾಲಯಗಳನ್ನು ಪ್ರಾರಂಭಿಸಿ ಓದುವ ಹವ್ಯಾಸ ಬೆಳೆಸಲಾಗುತ್ತದೆ ಎಂದು ಹೆಗ್ಗಡೆಯವರು ಮಾಹಿತಿ ನೀಡಿದರು.
ಉಪನ್ಯಾಸಗಳು: ಬೆಂಗಳೂರಿನ ಶಾಂತಾ ನಾಗಮಂಗಲ, ಡಾ. ರಘು, ವಿ., ಧಾರವಾಡದ ಡಾ. ಬಿ. ಎಂ. ಶರಭೇಂದ್ರ ಸ್ವಾಮಿ ಸಾಹಿತ್ಯ ಮತ್ತು ಸಾರ್ಥಕ ಬದುಕಿನ ಬಗ್ಗೆ ಉಪನ್ಯಾಸ ನೀಡಿದರು.
ರಾಜಶ್ರೀ ಎಸ್. ಹೆಗ್ಡೆ ವಂದಿಸಿದರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಉನ್ಯಾಸಕರಾದ ಡಾ. ಶ್ರೀಧರ ಭಟ್ ಮತ್ತು ಡಾ. ದಿವಾಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.






