ಮಹಡಿ ಮೇಲಿಂದ ಬಿದ್ದು ಯುವಕ ಮೃತ್ಯು
Wednesday, December 31, 2025
ಬಂಟ್ವಾಳ: ಮನೆಯ ಮಹಡಿ ಮೇಲಿನಿಂದ ಯುವಕನೋರ್ವ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ನಡುದಂಡೆ ಎಂಬಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ನಡುದಂಡೆ ನಿವಾಸಿ ಚಂದ್ರ ಪೂಜಾರಿ ಅವರ ಪುತ್ರ ಪ್ರವೀಣ್ (26) ಮೃತಪಟ್ಟು ದುರ್ದೈವಿಯಾಗಿದ್ದಾರೆ.
ಪ್ರತಿನಿತ್ಯ ರಾತ್ರಿ ಮೃತರು ಹಾಗೂ ಅವರ ಅಣ್ಣ ಊಟದ ಬಳಿಕ ಮನೆಯ ಮಹಡಿಯ ಮೇಲೆ ಹೋಗಿ ಮಾತುಕತೆ ನಡೆಸಿ ಬರುತ್ತಿದ್ದರೆನ್ನಲಾಗಿದೆ.
ಮಂಗಳವಾರ ಕೂಡ ರಾತ್ರಿ 9 ಗಂಟೆಯ ಹೊತ್ತಿಗೆ ಎಂದಿನಂತೆ ಅಣ್ಣ-ತಮ್ಮಂದಿರು ಮನೆಯ ಮಹಡಿ ಮೇಲೆ ಮಾತುಕತೆ ನಡೆಸುತ್ತಿದ್ದಂತೆ ಪ್ರವೀಣ್‌ಗೆ ಕರೆ ಬಂದಿದ್ದರಿಂದ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದು, ಆಗ ಅಣ್ಣ ಪ್ರಸಾದ್ ಮನೆಯೊಳಗೆ ಬಂದಿದ್ದರು.
ಇದಾದ ಕೆಲ ಸಮಯದ ಬಳಿಕ ಮೇಲಿಂದ ಬಿದ್ದ ಶಬ್ದ ಕೇಳಿದ್ದು, ತಕ್ಷಣ ಮನೆಮಂದಿ ಹೊರಗೆ ಹೋಗಿ ನೋಡಿದಾಗ ಪ್ರವೀಣ್ ಕೆಳಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಕೂಡಲೇ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಪರಿಕ್ಷೀಸಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೃತ ಪ್ರವೀಣ್ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ.