ಧರ್ಮಸ್ಥಳ ಪ್ರಕರಣ: ಬೆಳ್ತಂಗಡಿ ನ್ಯಾಯಾಲಯದಲ್ಲಿ ಧರ್ಮಸ್ಥಳ ಕ್ಷೇತ್ರದ ಪರ ವಕಾಲತ್ತ
ಬೆಳ್ತಂಗಡಿ: ಭಾರಿ ಸುದ್ದಿಯಾಗಿದ್ದ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಇದೀಗ ಶ್ರೀಕ್ಷೇತ್ರ ಧರ್ಮಸ್ಥಳ ಪ್ರವೇಶವಾಗಿದೆ. ಬೆಳ್ತಂಗಡಿ ನ್ಯಾಯಾಲಯಕ್ಕೆ ಬೆಂಗಳೂರಿನ ಹಿರಿಯ ವಕೀಲ ಸಿ.ವಿ.ನಾಗೇಶ್ ಬುಧವಾರ ಆಗಮಿಸಿದ್ದು, ಧರ್ಮಸ್ಥಳ ಕ್ಷೇತ್ರದ ಪರ ನ್ಯಾಯಾಲಯದಲ್ಲಿ ವಕಾಲತ್ತು ಹಾಕಿದ್ದಾರೆ.
ಚಿನ್ನಯ್ಯ ದೂರು ನೀಡುವಾಗ ಧರ್ಮಸ್ಥಳದ ಕ್ಷೇತ್ರದ ಹೆಸರು ಉಲ್ಲೇಖಿಸಲಾಗಿತ್ತು. ಬಳಿಕ ಎಸ್‌ಐಟಿ ತನಿಖೆಯಲ್ಲಿ ಧರ್ಮಸ್ಥಳದ ಪಾತ್ರ ಇಲ್ಲ ಎಂಬುದು ವರದಿ ನೀಡಲಾಗಿತ್ತು. ಸಂಪೂರ್ಣ ಪ್ರಕರಣ ಬುರುಡೆ ತಂಡ ನಡೆಸಿದ ಷಡ್ಯಂತ್ರ ಎಂದು ಎಸ್‌ಐಟಿ ವರದಿ ನೀಡಿತ್ತು. ಹೀಗಾಗಿ ಇದೀಗ ಧರ್ಮಸ್ಥಳ ಕ್ಷೇತ್ರ ಸಂತ್ರಸ್ತರು ನೆಲೆಯಲ್ಲಿ ನ್ಯಾಯಾಲಯದಲ್ಲಿ ವಕಾಲತ್ತು ಹಾಕಲಾಗಿದೆ.
ಇಂದು ನ್ಯಾಯಾಲಯದಲ್ಲಿ ಎರಡು ಗಂಟೆ ಸಿ.ವಿ.ನಾಗೇಶ್ ವಾದ ಮಾಡಿದ್ದಾರೆ. ಧರ್ಮಸ್ಥಳ ಕ್ಷೇತ್ರ ಸಂತ್ರಸ್ತರು ಅಥವಾ ದೂರು ದಾಖಲಿಸಿಕೊಳ್ಳಲು ವಾದ ನಡೆಸಿದ್ದಾರೆ. ವಾದವನ್ನು ಮುಂದಿನ ಜ.3 ಕ್ಕೆ ನ್ಯಾಯಾಲಯ ಮುಂದೂಡಿದೆ.
ವಕೀಲ ಸಿ.ವಿ.ನಾಗೇಶ್ ಜೊತೆ ರಾಜಶೇಖರ್, ಮಹೇಶ್ ಕಜೆ ಭಾಗಿಯಾಗಿದ್ದರು.
ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ. ಜಯಂತ್ ಹಾಗೂ ಸುಜಾತಾ ಭಟ್ ಸೇರಿ ಆರು ಆರೋಪಿಗಳು ಧರ್ಮಸ್ಥಳದ ವಿರುದ್ಧ ಅಪರಾಧ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಎಸ್ ಐಟಿ ದೃಢಪಡಿಸಿದೆ. ಹಣದ ಆಮಿಷಕ್ಕೆ ಒಳಗಾಗಿ ಮೊದಲ ಆರೋಪಿ ಚಿನ್ನಯ್ಯ ಬುರುಡೆ ಕಥೆ ಕಟ್ಟಿದ್ದ. ಬುರುಡೆ ಗ್ಯಾಂಗ್ ಚಿನ್ನಯ್ಯನಿಗೆ ಹಣ ಕೊಟ್ಟು ಪುಸಲಾಯಿಸಿತ್ತು. ಅಪರಿಚಿತ ಶವಗಳನ್ನು ಹೂತಿದ್ದೇನೆಂದು ಚಿನ್ನಯ್ಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು ಎಂಬುದು ಬಯಲಾಗಿತ್ತು.
ಚಿನ್ನಯ್ಯನಿಗೆ ಮೊದಲಿಂದ ಪರಿಚಿತನಾಗಿದ್ದ ವಿಠ್ಠಲಗೌಡ ಮಹೇಶ್ ತಿಮರೋಡಿ ಮನೆಗೆ ಆತನನ್ನು ಕರೆದೊಯ್ದಿದ್ದ. ತಿಮರೋಡಿ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಮಟ್ಟಣ್ಣನವರ್, ಜಯಂತ್, ವಿಠ್ಠಲಗೌಡ ಭಾಗಿಯಾಗಿದ್ದು, ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ಪಿತೂರಿಗೆ ಸಂಚು ನಡೆದಿತ್ತು. ಅದರಂತೆ ತಲೆ ಬುರುಡೆಯೊಂದನ್ನು ಚಿನ್ನಯ್ಯನಿಗೆ ಕೊಟ್ಟು ಪೊಲೀಸರಿಗೆ ದೂರು ಕೊಡಿಸಿದ್ದರು. ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ಕೊಡುವಂತೆ ಪ್ರೇರೇಪಿಸಿದ್ದರು ಎಂಬುದನ್ನು ಎಸ್‌ಐಟಿ ವರದಿ ಈಗಾಗಲೇ ಬಹಿರಂಗಗೊಳಿಸಿದೆ. ಈ ನಡುವೆ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ಸಲ್ಲಿಕೆಯಾಗಿರೋದು ಪ್ರಕರಣಕ್ಕೆ ಹೊಸ ದಿಕ್ಕಿನತ್ತ ಸಾಗಿದೆ.