ಪಾರ್ಟಿ ನಂತರ ಮಾತಿನ ಚಕಮಕಿ: ಸ್ನೇಹಿತನ ಹತ್ಯೆ
ಡಿ. 14 ರ ಭಾನುವಾರ ಸಂಜೆ ವೇಳೆಗೆ ಸಂತೋಷ್ ಪೂಜಾರಿ, ಸಚಿನ್, ಚೇತನ್, ಕೌಶಿಕ್, ಸುಜನ್ ಮತ್ತು ದರ್ಶನ್ ಎಂಬ ಸ್ನೇಹಿತರು ಬಾರ್‌ನಲ್ಲಿ ಪಾರ್ಟಿ ಮುಗಿಸಿ ಪಡುಕೆರೆಯ ಸರ್ಕಲ್‌ಗೆ ಬಂದು ಅಲ್ಲಿ ಊಟ ಮಾಡಿಕೊಂಡು ಮಾತನಾಡುತ್ತಿದ್ದರು. ದರ್ಶನ್ ಮತ್ತು ಕೌಶಿಕ್, ಅಂಕಿತ ಹಾಗೂ ಸುಜನ್ ರ ಮಾತು ಹೊರಳಿ ಸಂತೋಷನ ಕುಟುಂಬದ ವಿಚಾರ ಮತ್ತು ಕುಡಿಯುವ ವಿಚಾರದತ್ತ ತಿರುಗಿತು. ಈ ವೇಳೆ ಅವರು ಅವಾಚ್ಯವಾಗಿ ಮಾತನಾಡಿ ಜಗಳ ಮಾಡಿ ಸಂತೋಷನಿಗೆ ನಾಲ್ಕು ಜನರೂ ಸೇರಿ ಹೊಡೆದರು ಎನ್ನಲಾಗಿದೆ. ಪರಸ್ಪರ ದೂಡಾಡಿಕೊಂಡಿದ್ದು, ದರ್ಶನ್ ನು ಸಂತೋಷನಿಗೆ ಕುತ್ತಿಗೆ ಹಿಂಬದಿ ಕೈಯಿಂದ ಬಲವಾಗಿ ಹೊಡೆದಿರುತ್ತಾನೆ. ಕೌಶಿಕನು ಸಂತೋಷನಿಗೆ ಕೈಯಿಂದ ಹೊಡೆದಿರುತ್ತಾನೆ. ರಜತ್ ಎಂಬವರು ಇವರುಗಳ ಜಗಳ ತಪ್ಪಿಸಿರುತ್ತಾರೆ.
ಅವರುಗಳು ಹೊಡೆದಿರುವುದರಿಂದ ಸಂತೋಷನು ಅಲ್ಲಿಯೇ ಕುಸಿದು ಬಿದ್ದಿದ್ದು, ಅದನ್ನು ನೋಡಿದ ಅವರೆಲ್ಲರೂ ಅಲ್ಲಿಂದ ಹೊರಟು ಹೋಗಿರುತ್ತಾರೆ. ಸಂತೋಷನಿಗೆ ಬಾಯಿಯಿಂದ ನೊರೆ ಬರುತ್ತಿದ್ದು ಮಾತನಾಡುತ್ತಿರಲಿಲ್ಲ. ತಕ್ಷಣ ರಜತ್ ಸಚಿನ್, ಚೇತನ್ ಮತ್ತು ಪ್ರಕಾಶ್ ರವರನ್ನು ಕರೆಸಿ ಸಂತೋಷನನ್ನು ಒಂದು ಕಾರಿನಲ್ಲಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ವೈದ್ಯರು ಸಂತೋಷನನ್ನು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸಂತೋಷರಿಗೆ ದರ್ಶನ್, ಕೌಶಿಕ್ ಜೋಗಿ, ಅಂಕಿತ ಮತ್ತು ಸುಜನ್ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಮಾರಣಾಂತಿಕವಾಗಿ ಹೊಡೆದು ಕೊಲೆ ಮಾಡಿರುತ್ತಾರೆ ಎಂದು ಇದೀಗ ರಜತ್ ಕೋಟ ಪೊಲೀಸರಿಗೆ ದೂರು ನೀಡಿದ್ದಾರೆ.
ಇದರನ್ವಯ, ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ದರ್ಶನ್(21), ಪಾರಂಪಳ್ಳಿ, ಪಡುಕೆರೆ, ಕೌಶಿಕ್(21), ಸಾಸ್ತಾನ, ನೀರಾಡಿಜೆಡ್ಡು, ಪಾಂಡೇಶ್ವರ, ಅಂಕಿತ(19), ಕೋಟತಟ್ಟು, ಪಡುಕೆರೆ ಮತ್ತು ಸುಜನ್(21), ಕೋಟತಟ್ಟು, ಪಡುಕೆರೆ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ. ತನಿಖೆ ನಡೆದಿದೆ.