ಅತಿವೇಗಿ ಕ್ಯಾಬ್ ಚಾಲಕನಿಗೆ ಜೈಲು ಶಿಕ್ಷೆ
ಕುಂದಾಪುರ: ನಗರದ ಹೊರವಲಯದ ಮುಳ್ಳಿಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆಸಿ ಇಬ್ಬರ ಸಾವಿಗೆ ಕಾರಣನಾದ ಅತಿವೇಗಿ ಮ್ಯಾಕ್ಸಿ ಕ್ಯಾಬ್ ಚಾಲಕನಿಗೆ ಕುಂದಾಪುರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
2019ರ ಅ.30 ರಂದು ರಾತ್ರಿ 10 ಗಂಟೆಗೆ ಕೆ. ಶಾಬಾದ್ ಹುಸೇನ್ ಎಂಬವರು ತಮ್ಮ ಬೈಕ್ ನಲ್ಲಿ ಅಬ್ದುಲ್ ರಹೀಮ್ ಎಂಬವರನ್ನು ಕುಳ್ಳಿರಿಸಿಕೊಂಡು ಸವಾರಿ ಮಾಡುತ್ತಾ ಹೆದ್ದಾರಿ ದಾಟುತ್ತಿರುವಾಗ ವೇಗವಾಗಿ ಬಂದ ಮ್ಯಾಕ್ಸಿ ಕ್ಯಾಬ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಬೈಕ್ ಅದಕ್ಕೆ ಸಿಕ್ಕಿಬಿದ್ದಿದ್ದು, ಕ್ಯಾಬ್ ಸುಮಾರು ನೂರು ಮೀಟರ್ ವರೆಗೂ ಬೈಕನ್ನು ಎಳೆದೊಯ್ದಿತ್ತು. ಪರಿಣಾಮವಾಗಿ ಬೈಕ್ ಹಿಂಬದಿ ಸವಾರ ಅಬ್ದುಲ್ ರಹೀಮ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಚಲಾಯಿಸುತ್ತಿದ್ದ ಶಾಬಾದ್ ಹುಸೇನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯ ದಾರಿಯಲ್ಲಿ ಕೊನೆಯುಸಿರೆಳೆದಿದ್ದರು.
ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ನಾಯಕ್ ಕ್ಯಾಬ್ ಚಾಲಕ ರಾಜೇಂದ್ರ ಸೈರು ಕಲ್ಲುಕುಟಿಕರ್ ವಿರುದ್ಧ ಕುಂದಾಪುರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ವಿಚಾರಣೆಯ ವೇಳೆ ಸರ್ಕಾರಿ ಸಹಾಯಕ ಅಭಿಯೋಜಕಿ ಉಮಾ ದಾಮೋದರ ನಾಯ್ಕರ ವಾದ ಪುರಸ್ಕರಿಸಿದ ನ್ಯಾಯಾಧೀಶೆ ಶ್ರುತಿಶ್ರೀಯವರು, ಆರೋಪ ಸಾಬೀತುಗೊಂಡಿದೆ ಎಂದುದನ್ನು ಘೋಷಿಸಿ, ಆರೋಪಿ ರಾಜೇಂದ್ರ ಸೈರುಗೆ 1ವರ್ಷ 10 ತಿಂಗಳು ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿ ಆದೇಶಿಸಿದ್ದಾರೆ.