ಡಿ.7ರಂದು ಶಾರದಾ ಹೊನಲು ಬೆಳಕಿನ ಕ್ರೀಡೋತ್ಸವ’
ಮಂಗಳೂರು: ತುಳುನಾಡು ಎಜುಕೇಶನಲ್ ಟ್ರಸ್ಟ್ ಅಧಿನದ ಶಾರದಾ ಸಮೂಹ ಸಂಸ್ಥೆಗಳ ‘ಹೊನಲು ಬೆಳಕಿನ ಕ್ರೀಡೋತ್ಸವ’ ಡಿ.7ರಂದು ಸಂಜೆ 4ರಿಂದ ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ‘ಭೂವರಾಹ ಬಯಲು ಸಭಾಂಗಣ’ದಲ್ಲಿ ನಡೆಯಲಿದೆ ಎಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ತಿಳಿಸಿದರು.
ಮಕ್ಕಳಲ್ಲಿ ಶಿಸ್ತು, ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯು ವಿಶೇಷ ರೀತಿಯ ಪರಿಕಲ್ಪನೆಯನ್ನು ಹುಟ್ಟು ಹಾಕಿ ಹಲವಾರು ವರ್ಷಗಳಿಂದ ಸಾಹಸ ಕ್ರೀಡೆ, ನೃತ್ಯ, ಸಂಗೀತ ಒಳಗೊಂಡ ‘ಹೊನಲು ಬೆಳಕಿನ ಕ್ರೀಡೋತ್ಸವ’ ಎಂಬ ಅತ್ಯಂತ ವಿಶಿಷ್ಟ ಕಾರ್ಯಕ್ರಮ ನಡೆಸುತ್ತಿದೆ. ಶಾರದಾ ಸಮೂಹ ವಿದ್ಯಾಸಂಸ್ಥೆಗಳ 2000 ಮಂದಿ ವಿದ್ಯಾರ್ಥಿಗಳು ಹೊನಲು ಬೆಳಕಿನಲ್ಲಿ ಸಾಹಸ, ಸಾಂಸ್ಕೃತಿಕ, ಕಲಾ ಪ್ರಕಾರಗಳೊಂದಿಗೆ ಭಾಗವಹಿಸಿ ತಮ್ಮ ಕಲೆ, ವಿವಿಧ ವಿನ್ಯಾಸಗಳ ರಚನೆ, ಸಾಹಸ ಪ್ರದರ್ಶನ ನೀಡುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಅಮೋಘ ಪ್ರತಿಕ್ರಿಯೆ ದೊರಕುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಶಾರದಾ ವಿದ್ಯಾಸಂಸ್ಥೆಗಳ ನಿರ್ದೇಶಕ ಹಾಗೂ ಟ್ರಸ್ಟಿ ಸಮೀರ್ ಪುರಾಣಿಕ್ ಮಾತನಾಡಿ, ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕ್ರೀಡೋತ್ಸವ ಉದ್ಘಾಟಿಸುವರು. ಕಾರ್ಯಕ್ರಮಕ್ಕೂ ಮುನ್ನ ನವಭಾರತ ವೃತ್ತದಿಂದ ಶಾರದಾ ವಿದ್ಯಾಲಯವರೆಗೆ ಮೆರವಣಿಗೆ ನಡೆಯಲಿದೆ ಎಂದರು.
ಶಾರದಾ ಸಮೂಹ ಸಂಸ್ಥೆಗಳ ಆಯ್ದ ವಿದ್ಯಾರ್ಥಿಗಳು ಸುಮಾರು ನಾಲ್ಕು ಗಂಟೆಗಳ ಕಾಲ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ವಿವಿಧ ಸಾಹಸ ಪ್ರದರ್ಶನ ಮಾಡುವರು. ಮಲ್ಲಕಂಬ, ಯೋಗಾಸನ, ಪಿರಮಿಡ್ ರಚನೆ, ಫೈಯರ್ ಜಂಪ್ ಸೇರಿದಂತೆ ಸಾಂಸ್ಕೃತಿಕ, ಮನೋರಂಜನಾ ಕಲಾ ಪ್ರಕಾರಗಳನ್ನು ಪ್ರದರ್ಶಿಸುವರು. ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ ಎಂದು ಡಾ.ಎಂ.ಬಿ. ಪುರಾಣಿಕ್ ತಿಳಿಸಿದರು.
ಸಂಸ್ಥೆಯ ಟ್ರಸ್ಟಿ ಸುಧಾಕರ ರಾವ್ ಪೇಜಾವರ, ಶಾರದಾ ಪಪೂ ಕಾಲೇಜು ಪ್ರಾಂಶುಪಾಲ ಪ್ರಕಾಶ್ ನಾಯಕ್, ಶಾರದಾ ವಿದ್ಯಾಲಯ ಪ್ರಾಂಶುಪಾಲ ದಯಾನಂದ ಕಟೀಲು ಉಪಸ್ಥಿತರಿದ್ದರು.