ಜಾಮೀನು ದೊರೆತರೂ ಬಿಡುಗಡೆಯಾಗದ ಚಿನ್ನಯ್ಯ
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಂಧಿತನಾಗಿ ಶಿವಮೊಗ್ಗ ಜೈಲು ಸೇರಿರುವ ಮಾಸ್ಕ್‌ಮ್ಯಾನ್ ಚಿನ್ನಯ್ಯನಿಗೆ ಜಾಮೀನು ಮಂಜೂರಾದರೂ ಇನ್ನು ಬಿಡುಗಡೆಯ ಭಾಗ್ಯ ದೊರೆತಿಲ್ಲ.
ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿ 9 ದಿನ ಕಳೆದರೂ ಶ್ಯೂರಿಟಿ ನೀಡಲು ಯಾರೂ ಮುಂದೆ ಬಾರದ ಕಾರಣ ಶಿವಮೊಗ್ಗ ಜಿಲ್ಲಾ ಕಾರಾಗೃಹದಲ್ಲೇ ಚಿನ್ನಯ್ಯ ದಿನ ಕಳೆಯುವಂತಾಗಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯನನ್ನು ಬಳಸಿಕೊಂಡು ಬುರುಡೆ ಗ್ಯಾಂಗ್ ದೂರು ನೀಡಿತ್ತು. ಆದರೆ ಯಾವಾಗ ಬುರುಡೆ ಗ್ಯಾಂಗ್ ವಿರುದ್ಧವೇ ಚಿನ್ನಯ್ಯ ತಿರುಗಿ ಬಿದ್ದನೋ ಅಲ್ಲಿಂದ ಗ್ಯಾಂಗ್ ಸದಸ್ಯರು ಚಿನ್ನಯ್ಯನ ವಿರುದ್ಧವೇ ಮಾತನಾಡುತ್ತಿದ್ದಾರೆ.
ವಿಶೇಷ ತನಿಖಾ ತಂಡ ತನಿಖಾ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು. ಅದರ ಬೆನ್ನಲ್ಲೇ ಚಿನ್ನಯ್ಯ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ಪುರಸ್ಕರಿಸಿದ ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯ 1 ಲಕ್ಷ ರೂ. ಬಾಂಡ್ ಸೇರಿ 12 ಷರತ್ತುಗಳನ್ನು ವಿಧಿಸಿ ನ.25ರಂದು ಜಾಮೀನು ಮಂಜೂರು ಮಾಡಿತ್ತು.
ಆ.23ರಂದು ಸುದೀರ್ಘ ವಿಚಾರಣೆ ಬಳಿಕ ಬುರುಡೆ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನನ್ನು ಬಂಧಿಸಲಾಗಿತ್ತು. ಸೆ.೬ರಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಶಿವಮೊಗ್ಗ ಜೈಲಿಗೆ ಚಿನ್ನಯ್ಯನನ್ನು ಕರೆತರಲಾಗಿತ್ತು.