ನಾಳೆ ಮುಖ್ಯಮಂತ್ರಿ, ವೇಣುಗೋಪಾಲ್ ಮಂಗಳೂರು ಭೇಟಿ: ರಾಜಕೀಯ ಕುತೂಹಲ
ಮಂಗಳೂರು: ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಂಚಿಕೆ ತಿಕ್ಕಾಟ ತೀವ್ರಗೊಂಡಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಡಿ.3 ರಂದು ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ.
ವಿಧಾನ ಪರಿಷತ್ ಸದಸ್ಯರೂ ಆಗಿರುವ ಕಾರ್ಯಕ್ರಮ ಆಯೋಜನೆಯ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಶ್ರೀ ಗುರುವಿನ ಮಹಾ ಸಮಾಧಿ ಶತಾಬ್ಧಿ ಸರ್ವಮತ ಸಮ್ಮೇಳನ ಶತಮಾನೋತ್ಸವದಲ್ಲಿ ಉಭಯ ನಾಯಕರು ಭಾಗವಹಿಸುತ್ತಿದ್ದಾರೆ. ಇಬ್ಬರು ನಾಯಕರ ಮುಖಾಮುಖಿ ಭೇಟಿ ರಾಜಕೀಯ ವಲಯದಲ್ಲಿ ಮಹತ್ವ ಪಡೆದಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ವಿವಿಧ ರಾಜಕೀಯ ಚಟುವಟಿಕೆ, ಚರ್ಚೆಗಳು ಚುರುಕುಗೊಂಡಿದೆ. ಈ ನಡುವೆ ಮಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಕೆ.ಸಿ. ವೇಣುಗೋಪಾಲ್ ಭೇಟಿ ಹೊಂದುತ್ತಿರುವುದು ರಾಜಕೀಯ ವಲಯದಲ್ಲಿ ಹೊಸ ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಈ ಸಂದರ್ಭ ರಹಸ್ಯ ಮಾತುಕತೆ ನಡೆಯುವ ಸಾಧ್ಯತೆಯೂ ಇಲ್ಲದಿಲ್ಲ.