ಪ್ರಯೋಗಶೀಲತೆ ಕಾರಂತರ ಬರವಣಿಗೆಯ ಪ್ರಧಾನ ಗುಣ: ಡಾ. ಗಣನಾಥ ಎಕ್ಕಾರು

ಪ್ರಯೋಗಶೀಲತೆ ಕಾರಂತರ ಬರವಣಿಗೆಯ ಪ್ರಧಾನ ಗುಣ: ಡಾ. ಗಣನಾಥ ಎಕ್ಕಾರು


ಮಂಗಳೂರು: ಕಾದಂಬರಿ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಹೊಂದಿದ್ದ ಕಾರಂತರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತರಾದವರಲ್ಲ, ಸಾಹಿತ್ಯ ನಾಟಕ ವಿಜ್ಞಾನ ಹಾಗೂ ಇನ್ನಿತರ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದರು. ಪ್ರಯೋಗಶೀಲತೆ ಅವರ ಬರವಣಿಗೆಯ ಪ್ರಧಾನ ಗುಣ ಎಂದು ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಹೇಳಿದರು.

ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಡಾ. ಪಿ ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಮಂಗಳೂರು ಇವರ ಸಹಯೋಗದಲ್ಲಿ ನಡೆದ ಅರಿವಿನ ಬೆಳಕು ಉಪನ್ಯಾಸ ಮಾಲೆ-12 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರಂತರನ್ನು ಕೇಂದ್ರವಾಗಿಟ್ಟುಕೊಂಡು ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿ ಕೃತಿಗಳ ಮೂಲಕ ವೈಜ್ಞಾನಿಕ ಹಾಗೂ ವೈಚಾರಿಕ ಪ್ರಜ್ಞೆಯನ್ನು ಕಟ್ಟಿಕೊಟ್ಟ ಕಾರಂತರ ಬದುಕು ಮತ್ತು ಬರಹಗಳನ್ನು ಯುವ ಪೀಳಿಗೆಗೆ ತಲುಪಿಸುವ ಜೊತೆಗೆ ಪುಸ್ತಕ ಓದುವಿಕೆ ಹಾಗೂ ಸಾಹಿತ್ಯದತ್ತ ಆಸಕ್ತಿಯನ್ನು ಮೂಢಿಸುವುದು ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು, ಓದುವ ಹವ್ಯಾಸ ಚಿಂತನೆಯನ್ನು ವಿಸ್ತರಿಸುತ್ತದೆ. ಇಂದಿನ ಬದುಕಿನ ಶೈಲಿ ಯುವ ಜನತೆಯನ್ನು ಪುಸ್ತಕಗಳ ಓದುವಿಕೆಯಿಂದ ಅಂತರವನ್ನು ರೂಪಿಸಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಅಧ್ಯಯನದ ಜೊತೆಗೆ ಬದುಕಿನ ಅನೇಕ ಮೌಲ್ಯಗಳನ್ನು ತಿಳಿಸಿಕೊಡುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಆಳವಡಿಸಿಕೊಳ್ಳಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕಿ ಮತ್ತು ಚಿಂತಕಿ ಡಾ. ಮೀನಾಕ್ಷಿ ರಾಮಚಂದ್ರ ಮಾತನಾಡಿ, ‘ಡಾ. ಶಿವರಾಮ ಕಾರಂತರ ಚೋಮನದುಡಿ ಮತ್ತು ಮೈಮನಗಳ ಸುಳಿಯಲ್ಲಿ ಕಾದಂಬರಿಗಳ ತೌಲನಿಕ ವಿಮರ್ಶೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕ ದೇವಿಪ್ರಸಾದ್, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಪ್ರಿಯಾ ಸ್ವಾಗತಿಸಿ, ಉಪನ್ಯಾಸಕರಾದ ಡಾ. ವಿನೋದಾ ನಿರೂಪಿಸಿ, ಉಷಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article